ಕಾರವಾರ ಬಂದರಿನಲ್ಲಿ ಬಿದ್ದಿರುವ ಗ್ರಾನೈಟ್
- ಕಾರವಾರ ಬಂದರಿನಲ್ಲಿ ಹಲವು ವರ್ಷಗಳಿಂದ ಬಿದ್ದಿರುವ 900 ಕ್ಕೂ ಅಧಿಕ ಕಲ್ಲುಗಳು
- ಎರಡು ಬಾರಿ ಟೆಂಡರ್ ಕರೆದರೂ ಕೊಳ್ಳಲು ಬರದ ಜನ
ಕಾರವಾರ: ಬೈತಖೋಲ್ ವಾಣಿಜ್ಯ ಬಂದರಿನ ವ್ಯಾಪ್ತಿಯಲ್ಲಿ 15 ವರ್ಷಕ್ಕೂ ಹೆಚ್ಚು ಅವಧಿಯಿಂದ ಬಿದ್ದುಕೊಂಡಿರುವ ಬೃಹತ್ ಗ್ರಾನೈಟ್ ಕಲ್ಲುಗಳ ಖರೀದಿಗೆ ಯಾರೂ ಬರುತ್ತಿಲ್ಲ. ಇದರಿಂದ ಅದನ್ನು ಸಮುದ್ರ ಕೊರೆತ ತಡೆ ಕಾಮಗಾರಿಗೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ.
ಈ ಹಿಂದೆ ಬಾಗಲಕೋಟೆ ಜಿಲ್ಲೆಯಿಂದ ಗ್ರಾನೈಟ್‌ಗಳನ್ನು ಕಾರವಾರ ಬಂದರಿನ ಮೂಲಕ ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಬೃಹತ್ ಬಂಡೆಗಳನ್ನು ಕಾರವಾರ ಬಂದರು ಪ್ರದೇಶದಲ್ಲಿ ತಂದು ಇಳಿಸುವ ಖಾಸಗಿ ಕಂಪನಿಗಳು ಬಂದರು ಇಲಾಖೆಗೆ ಜಾಗದ ಬಾಡಿಗೆ ನೀಡುತ್ತಿದ್ದವು. ನಂತರ ಶುಲ್ಕಗಳನ್ನು ತುಂಬಿ ಹಡಗುಗಳ ಮೂಲಕ ಟರ್ಕಿ, ತೈವಾನ್ ಮುಂತಾದ ದೇಶಗಳಿಗೆ ರಫ್ತು ಮಾಡುತ್ತಿದ್ದವು. ಆದರೆ, 2010 ರಲ್ಲಿ ಅಕ್ರಮ ಅದಿರು ವಹಿವಾಟಿನ ವಿಚಾರದಲ್ಲಿ ತನಿಖೆ ಆರಂಭವಾದ ನಂತರ ನಿಧಾನವಾಗಿ ಗ್ರಾನೈಟ್ ವಹಿವಾಟೂ ಸಹ ಸ್ಥಗಿತವಾಯಿತು. ರಫ್ತು ಮಾಡುವ ಸಲುವಾಗಿ ಕಾರವಾರಕ್ಕೆ ತಂದು ರಾಶಿ ಹಾಕಿದ ಗ್ರಾನೈಟ್ ಕಲ್ಲುಗಳು ಇದುವರೆಗೂ ಅಲುಗಾಡದೇ ಬಿದ್ದುಕೊಂಡಿವೆ.
ಒಂದಲ್ಲ ಎರಡಲ್ಲ:
2710 ಕ್ಯೂಬಿಕ್ ಮೀಟರ್‌ನ ಒಟ್ಟು 960 ಕ್ಕೂ ಹೆಚ್ಚು ಗ್ರಾನೈಟ್ ಕಲ್ಲುಗಳು ಬಂದರು ಪ್ರದೇಶದಲ್ಲಿ ಬಿದ್ದುಕೊಂಡಿವೆ. ಅದಕ್ಕಾಗಿ ಬಂದರು ಇಲಾಖೆಯ ಸುಮಾರು ಮೂರು ಎಕರೆ ಉತ್ತಮ ಪ್ರದೇಶ ಬಂದರು ಬಳಕೆಗೆ ಸಿಗದಂತಾಗಿದೆ. ಗ್ರಾನೈಟ್‌ಗಳಿಂದ ಯಾವುದೇ ಆದಾಯವೂ ಬರುತ್ತಿಲ್ಲ. ಇದರಿಂದ ಅವುಗಳನ್ನು ವಿಲೇವಾರಿ ಮಾಡಲು ಮೆರಿಟೈಮ್ ಬೋರ್ಡ್ ಯೋಜಿಸಿತ್ತು. ಅದು ಖನಿಜವಾಗಿದ್ದರಿಂದ ಅದರ ಗುಣಮಟ್ಟ ಹಾಗೂ ಹಾಗೂ ಮೌಲ್ಯಮಾಪನ ಮಾಡಿ ರಾಜಧನ ಪಡೆದು, ಹರಾಜು ಹಾಕುವ ಜವಾಬ್ದಾರಿಯನ್ನು ಗಣಿ ಇಲಾಖೆಗೆ ವರ್ಷದ ಹಿಂದೆ ವಹಿಸಲಾಗಿದೆ.
ಎರಡು ಬಾರಿ ಟೆಂಡರ್:
ಗ್ರಾನೈಟ್‌ಗಳನ್ನು ವಿಲೇವಾರಿ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎರಡು ಬಾರಿ ಟೆಂಡರ್ ಕರೆಯಿತು. ಆದರೆ, ಯಾರೂ ಅದಕ್ಕೆ ಆಸಕ್ತಿ ತೋರಿಲ್ಲ. ಒಮ್ಮೆ ಸ್ಥಳೀಯ ಉದ್ಯಮಿಯೊಬ್ಬರು ಬಂದರೂ ಅದರ ವಿಲೇವಾರಿಗೆ ಮುಂದಾಗಿಲ್ಲ. ಪ್ರಸ್ತುತ ಬೆಲೆಯಲ್ಲಿ ಎಲ್ಲ ಸೇರಿ 1.5 ಕೋಟಿಯಷ್ಟು ಗ್ರಾನೈಟ್‌ಗಳಿವೆ. ಅವುಗಳನ್ನು ವಿದೇಶಕ್ಕೆ ರಫ್ತು ಮಾಡಲು ಯಾವುದೇ ರಫ್ತು ಕಂಪನಿಗಳು ಆಸಕ್ತಿ ತೋರುತ್ತಿಲ್ಲ. ಸ್ಥಳೀಯ ಗ್ರಾನೈಟ್ ಫ್ಯಾಕ್ಟರಿಗಳಿಗೆ ಕೊಂಡೊಯ್ಯುವ ವೆಚ್ಚವೇ ಅಽಕವಾಗಲಿದೆ ಎಂಬ ಲೆಕ್ಕಾಚಾರ ನಡೆದಿದೆ.
ಕಡಲ ಕೊರೆತ ತಡೆಯಲು ಬಳಸಿ
ಕಾರವಾರ, ಅಂಕೋಲಾ ಭಾಗದಲ್ಲಿ ವಿವಿಧೆಡೆ ವಿಪರೀತ ಕಡಲ ಕೊರೆತವಾಗುತ್ತಿದೆ. ಕಡಲ ಕೊರೆತ ತಡೆ ಕಾಮಗಾರಿಗೆ ಬೃಹತ್ ಬಂಡೆಗಳು ಸಿಗುತ್ತಿಲ್ಲ. ಇದರಿಂದ ಇದೇ ಕಲ್ಲನ್ನು ಕಡಲ ಕೊರೆತ ಕಾಮಗಾರಿಗೆ ಬಳಸಿ ಎಂದು ಶಾಸಕ ಸತೀಶ ಸೈಲ್ ಗಣಿ ಇಲಾಖೆಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ನಿಯಮದಂತೆ ಕ್ರಮ ವಹಿಸುವಂತೆ ಜಿಲ್ಲೆಯ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಽಕಾರಿಗಳಿಗೆ ಆದೇಶ ನೀಡಿದ್ದಾರೆ.
ಜಾಗದ ಕೊರತೆ
ಹೊಸ ವಸ್ತುಗಳ ಆಮದು ರಫ್ತು ಮಾಡಲು ಟ್ಯಾಂಕರ್‌ಗಳು, ಅಥವಾ ಗೋದಾಮು ನಿರ್ಮಾಣಕ್ಕೆ ಬಂದರು ಇಲಾಖೆಗೆ ಜಾಗ ಬೇಕಾಗಿದೆ. ಆದರೆ, ಬೃಹತ್ ಗ್ರಾನೈಟ್‌ಗಳು ವಿವಿಧೆಡೆ ಆವರಿಸಿದ್ದರಿಂದ ಅಮೂಲ್ಯ ಜಾಗ ವ್ಯರ್ಥವಾಗುತ್ತಿದೆ ಎಂಬುದು ಬಂದರು ಅಧಿಕಾರಿಗಳ ಅಭಿಪ್ರಾಯ. ಅವುಗಳನ್ನು ಎತ್ತಿ ಒತ್ತಟ್ಟಿಗಿಡೋಣ ಎಂದರೆ ಸಣ್ಣಪುಟ್ಟ ಕ್ರೇನ್‌ಗಳಿಂದಲೂ ಅವುಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ.
ಎರಡು ಬಾರಿ ಟೆಂಡರ್ ಕರೆದರೂ ಗ್ರಾನೈಟ್ ಪಡೆಯಲು ಯಾರೂ ಬಂದಿಲ್ಲ. ಈ ಬಗ್ಗೆ ನಮ್ಮ ಕೇಂದ್ರ ಕಚೇರಿಗೆ ಪತ್ರ ಬರೆದು, ಮುಂದೇನು ಮಾಡಬೇಕು ಎಂದು ನಿರ್ದೇಶನ ಕೇಳಲಾಗುವುದು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ