ಕಾರವಾರ ಬಂದರಿನ ಜಟ್ಟಿ  
ಉತ್ತರ ಕನ್ನಡ

ಕಾರವಾರ ವಾಣಿಜ್ಯ ಬಂದರು ಲೀಸ್‌ ಪಡೆಯಲು ಮುಂದಾದ ಅನುರಾಧಾ ಹೋಲ್ಡಿಂಗ್ಸ್‌

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • 15 ವರ್ಷ ಲೀಸ್‌ಗೆ ನೀಡಲು ಸರ್ಕಾರ ಟೆಂಡರ್‌
  • ಮೊದಲ ಬಾರಿಗೆ ಬರ್ತ್‌ ಖಾಸಗಿಗೆ ಲೀಸ್‌
ಕಾರವಾರ: ಇಲ್ಲಿನ ವಾಣಿಜ್ಯ ಬಂದರಿನ ಒಂದು ಭಾಗವನ್ನು ಖಾಸಗಿಗೆ ವಹಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಬೆಂಗಳೂರು ಮೂಲದ ಅನುರಾಧಾ ಹೋಲ್ಡಿಂಗ್ಸ್ಲಿಪ್ರೈ. ಕಂಪನಿ ಬಂದರಿನ ಲೀಸ್ ಪಡೆದುಕೊಂಡಿದೆ.
ಕಾರವಾರ ವಾಣಿಜ್ಯ ಬಂದರಿನ 150 ಮೀಟರ್ ನಿಲ್ದಾಣ (ಜಟ್ಟಿ ಅಥವಾ ಬರ್ತ್)ನ್ನು ನವೀಕರಣ, ಬಳಕೆ, ನಿರ್ವಹಣೆ ಮತ್ತು ಹಸ್ತಾಂತರ(ಆರ್‌ಒಎಂಟಿ) ಮಾದರಿಯಲ್ಲಿ 15 ವರ್ಷ ಲೀಸ್‌ಗೆ ನೀಡುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಇದೇ ಮೊದಲ ಬಾರಿಗೆ ಬಂದರಿನ ಜಟ್ಟಿಯನ್ನು ಖಾಸಗಿಗೆ ವಹಿಸಲಾಗಿದ್ದು, ನಿರೀಕ್ಷೆಗೂ ಮೀರಿಸ ಸ್ಪಂದನೆ ದೊರಕಿದೆ.
ಕರ್ನಾಟಕ ಮೆರಿಟೈಮ್ ಬೋರ್ಡ್(ಕೆಎಂಬಿ) ಪ್ರತಿ ಟನ್‌ಗೆ ಕನಿಷ್ಠ 80 ರೂ. ದರ ನಿಗದಿ ಮಾಡಿ ಟೆಂಡರ್ ಕರೆದಿತ್ತು. ಅನುರಾಧಾ ಹೋಲ್ಡಿಂಗ್ಸ್ ಪ್ರತಿ ಟನ್‌ಗೆ 212 ರೂ.ಗಳನ್ನು ಪಾವತಿಸುವ ಬಿಡ್ ಮಾಡಿ, ಜಟ್ಟಿಯನ್ನು ತನ್ನದಾಗಿಸಿಕೊಂಡಿತು. ಟೆಂಡರ್‌ನಲ್ಲಿ ಇನ್ನೂ ಹಲವು ಕಂಪನಿಗಳು ಬಿಡ್ ಮಾಡಿದ್ದವು.
ಕಾರವಾರ ಬಂದರಿನಲ್ಲಿ ಒಟ್ಟು 375 ಮೀಟರ್ ಉದ್ದದ ಹಡಗು ಕಟ್ಟೆ ಇದ್ದು, ಅದರ ಕೆಲ ಭಾಗವನ್ನು ಭಾರತೀಯ ತಟರಕ್ಷಕ ದಳ ಬಳಕೆ ಮಾಡಿಕೊಳ್ಳುತ್ತಿದೆ. 150 ಮೀ. ಉದ್ದದ ಬರ್ತ್ ಹಾಗೂ ಬೃಹತ್ ಗೋಡೌನ್ ಖಾಸಗಿ ಕಂಪನಿಗೆ ನೀಡಲಾಗುತ್ತದೆ. ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಸರ್ಕಾರದಿಂದ ಅನುಮೋದನೆ ಬಂದ ಬಳಿಕ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದು ಕೆಎಂಬಿ ಕಾರ್ಯನಿರ್ವಾಹಕ ಇಂಜಿನಿಯರ್ ಟಿ.ಎಸ್.ರಾಠೋಡ ತಿಳಿಸಿದ್ದಾರೆ.