ಕಾರವಾರ: ವಾಣಿಜ್ಯ ಬಂದರಿನ ಬಿಟುಮಿನ್(ಡಾಂಬರು) ಆಮದು ಪ್ರಕ್ರಿಯೆ ಕಡಿಮೆಯಾಗಿದೆ ಇದರಿಂದ ಬಂದರಿನ ಆದಾಯದಲ್ಲಿ ಗಣನೀಯ ಇಳಿಕೆಯಾಗುವ ಆತಂಕವಿದೆ. ಮಾತ್ರವಲ್ಲ ರಾಜ್ಯದ ಅಭಿವೃದ್ಧಿಯ ಮೇಲೂ ಇದು ದುಷ್ಪರಿಣಾಮ ಬೀರುವ ಆತಂಕವಿದೆ.
ರಾಜ್ಯದಲ್ಲಿ ಕಾರವಾರ ಹಾಗೂ ಮಂಗಳೂರಿನಿಂದ ಮಾತ್ರ ಕೊಲ್ಲಿ ರಾಷ್ಟ್ರಗಳಿಂದ ಬಿಟುಮಿನ್ ಆಮದು ಮಾಡಿ ಸಂಗ್ರಹಿಸಲಾಗುತ್ತದೆ. ಖಾಸಗಿ ಕಂಪನಿಗಳಿಂದ ಗುತ್ತಿಗೆದಾರರಿಗೆ ನೀಡಲಾಗುತ್ತದೆ.
ಕಾರವಾರ ಬಂದರಿಗೆ ತಿಂಗಳಲ್ಲಿ ಸಾಮಾನ್ಯಾವಾಗಿ ಕನಿಷ್ಠ ಎರಡು ಬಿಟುಮಿನ್ ಹಡಗುಗಳು ಬರುತ್ತಿದ್ದವು. ಆದರೆ, ಕಳೆದ ಒಂದುವರೆ ತಿಂಗಳಲ್ಲಿ ಒಂದೇ ಹಡಗು ಮಾತ್ರ ಬಿಟುಮಿನ್ ತುಂಬಿಕೊಂಡು ಚೀನಾದಿಂದ ಬಂದಿದೆ. ಬಿಟುಮಿನ್ ಬೆಲೆ ಹೆಚ್ಚಿದ್ದು, ಹೊಸದಾಗಿ ಹಡಗುಗಳು ಬರುತ್ತಿಲ್ಲ. ಎರಡು ತಿಂಗಳ ಹಿಂದೆ ಪ್ರತಿ ಟನ್‌ಗೆ 32 ರೂ. ಇದ್ದ ಬಿಟುಮಿನ್ ಬೆಲೆ ಈಗ ಸುಮಾರು 80 ರೂ. ದಾಟಿದೆ. ಇದರಿಂದ ರಸ್ತೆ ಕಾಮಗಾರಿಗಳಿಗೆ ಹಿನ್ನಡೆಯಾಗುವ ಆತಂಕವಿದೆ.
ವಹಿವಾಟು ಇಳಿಕೆ
ಕಾರವಾರ ಬಂದರಿನ ಒಟ್ಟಾರೆ ಆಮದು ಚಟುವಟಿಕೆಯಲ್ಲೂ ಈ ಆರ್ಥಿಕ ವರ್ಷದಲ್ಲಿ ಇಳಿಕೆಯಾಗಿದೆ. 2025 ರ ಏಪ್ರಿಲ್‌ನಿಂದ ಮಾರ್ಚ್ ಅಂತ್ಯದವರೆಗೆ 91 ಹಡಗುಗಳು ಮಾತ್ರ ಕಾರವಾರಕ್ಕೆ ಬಂದಿದ್ದು, 11.04 ಕೋಟಿ ರೂ. ನೇರ ಆದಾಯ ಬಂದಿದೆ. 2024 ರಲ್ಲಿ 97 ಹಡಗುಗಳು ಬಂದಿದ್ದು, 13.2 ಕೋಟಿ ರೂ., 2023 ರಲ್ಲಿ 122 ಹಡಗುಗಳು ಬಂದಿದ್ದು, 18 ಕೋಟಿ ರೂ. ಆದಾಯ ಬಂದಿತ್ತು.
ಕಾರವಾರ ಬಂದರಿನಿಂದ ರಫ್ತು ಚಟುವಟಿಕೆ ಸಂಪೂರ್ಣ ಬಂದ್ ಆಗಿದೆ. ಈ ಮೊದಲು ಕಾರವಾರ ಬಂದರಿನಿಂದ ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲು ರಫ್ತಾಗುತ್ತಿತ್ತು. ಅವುಗಳ ರಫ್ತು ಬಂದ್ ಆಗಿ 15 ವರ್ಷ ಕಳೆದಿದೆ. ನಂತರ ಕಾಕಂಬಿ ಯುರೋಪಿಯನ್ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. ಆದರೆ, 2024 ರಲ್ಲಿ ಭಾರತ ಸರ್ಕಾರ ಎಥೇನಾಲ್ ಅಭಿವೃದ್ಧಿಯ ಸಲುವಾಗಿ ಕಾಕಂಬಿ ರಫ್ತಿನ ಮೇಲಿನ ಸುಂಕವನ್ನು ಹೆಚ್ಚಿಸಿತು. ಇದರಿಂದ ಕಾಕಂಬಿ ರಫ್ತೂ ಅಲ್ಲಿಂದ ಬಂದ್ ಆಗಿದೆ. ರಾಕ್ ಪಾಸ್ಪೇಟ್, ಕಲ್ಲು ಉಪ್ಪ , ಡೀಸೆಲ್ ಹಾಗೂ ಬಿಟುಮಿನ್ ಆಮದು ಕಾರವಾರ ಬಂದರಿನ ಆದಾಯದ ಮೂಲವಾಗಿದೆ. ಆದರೆ, ಈಗ ಅವುಗಳೂ ಇಳಿಕೆಯಾಗಿದ್ದು, ಆದಾಯದ ಮೇಲೆ ಹೊಡೆದ ಬಿದ್ದಿದೆ.