ಸಿಇಒ ಬಾಲಚಂದ್ರ ಹಾಗೂ ವಿಕ್ರಂ ವಿಶ್ವನಾಥ್ ಒಪ್ಪಂದ ಮಾಡಿಕೊಂಡರು
- ಎಎಚ್‌ಪಿಎಲ್ ಎಸ್‌ಪಿಎಂ ಲಾಜಿಸ್ಟಿಕ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿಯ ಜೊತೆ ಒಪ್ಪಂದ
- ಬಂದರಿಗೆ ವಾರ್ಚಿಕ 26 ಕೋಟಿ ರೂ. ನಿಕ್ಕಿ ಆದಾಯ
ಇಲ್ಲಿನ ವಾಣಿಜ್ಯ ಬಂದರಿನ ಧಕ್ಕೆಯನ್ನು ಖಾಸಗಿಗೆ ವಹಿಸುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಏಪ್ರಿಲ್ ತಿಂಗಳಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಎಎಚ್‌ಪಿಎಲ್ ಎಸ್‌ಪಿಎಂ ಲಾಜಿಸ್ಟಿಕ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿಯು ಬಂದರಿನ ಧಕ್ಕೆಯನ್ನು ವಹಿಸಿಕೊಳ್ಳುವ ಟೆಂಡರ್‌ನ್ನು ತನ್ನದಾಗಿಸಿಕೊಂಡಿತ್ತು. ಕರ್ನಾಟಕ ಜಲಸಾರಿಗೆ ಮಂಡಳಿಯ ಸಿಇಒ ಬಾಲಚಂದ್ರ ಹಾಗೂ ಖಾಸಗಿ ಕಂಪನಿಯ ಡೈರೆಕ್ಟರ್ ವಿಕ್ರಂ ವಿಶ್ವನಾಥ್ ಅವರು ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಿದರು.
ಬಂದರಿನ ಮೂಲಕ ನಿರ್ವಹಿಸುವ ಪ್ರತಿ ಮೆಟ್ರಿಕ್ ಟನ್ ಸರಕಿಗೆ 212 ರೂ. ರಾಜಧನವನ್ನು ಜಲಸಾರಿಗೆ ಮಂಡಳಿಗೆ ನೀಡಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಜಲಸಾರಿಗೆ ಮಂಡಳಿಗೆ ವಾರ್ಷಿಕ 26.5 ಕೋಟಿ ರೂ. ನಿಕ್ಕಿ ಆದಾಯ ಬರಲಿದೆ. ಬ್ಲಾ÷್ಯಕ್ ಬ್ರಿಕ್ಸ್ ಎಂಬ ಕಂಪನಿಯು ಟ್ರಾನ್ಸಾಕ್ಷನ್ ಅಡ್ವೈಸರ್ ಆಗಿ ಕಾರ್ಯ ನಿರ್ವಹಿಸಿದ್ದು, ಈ ವಿಷಯವನ್ನು ಪ್ರಕಟಿಸಿದೆ.
ಅತಿ ಹೆಚ್ಚು ರಾಜಧನ:
ಎಎಚ್‌ಪಿಎಲ್ ಎಸ್‌ಪಿಎಂ ಲಾಜಿಸ್ಟಿಕ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿಯು ಬೆಂಗಳೂರು ಮೂಲದ್ದಾಗಿದ್ದು, ಅನುರಾಧಾ ಹೋಲ್ಡಿಂಗ್ಸ್ ಎಂಬ ಹೆಸರಿನಲ್ಲೂ ವ್ಯವಹಾರ ನಡೆಸುತ್ತದೆ. ಕಾರವಾರ ವಾಣಿಜ್ಯ ಬಂದರು 375 ಮೀಟರ್ ಧಕ್ಕೆ (ಹಡಗು ಕಟ್ಟೆ ಅಥವಾ ಜಟ್ಟಿ) ಇದೆ. ಅದರಲ್ಲಿ 150 ಮೀಟರ್ ಧಕ್ಕೆ ಹಾಗೂ ಗೋಡೌನ್‌ನನ್ನು ಖಾಸಗಿಗೆ ವಹಿಸಲಾಗುತ್ತಿದೆ. ಧಕ್ಕೆಯ ನವೀಕರಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ಹಸ್ತಾಂತರ(ಆರ್‌ಒಎಂಟಿ) ಮಾದರಿಯಲ್ಲಿ 15 ವರ್ಷ ಲೀಸ್‌ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಚೌಗುಲೆ ಇಪಿಸಿ ಪ್ರೈ, ಹಸನ್ ಹಾಜಿ ಆ್ಯಂಡ್ ಕೋ ಮುಂತಾದ ದೇಶದ ಪ್ರಸಿದ್ಧ ಹಡಗು ವಹಿವಾಟು ಕಂಪನಿಗಳು ಭಾಗವಹಿಸಿದ್ದವು. ಅದರಲ್ಲಿ ಅತಿ ಹೆಚ್ಚು ರಾಜಧನ ಕೋಟ್ ಮಾಡಿದ ಎಎಚ್‌ಪಿಎಲ್ ಕಂಪನಿ ಟೆಂಡರ್ ಪಡೆದುಕೊಂಡಿತ್ತು. ಇದು ದೇಶದ ವಾಣಿಜ್ಯ ಬಂದರಿನ ಧಕ್ಕೆಯೊಂದಕ್ಕೆ ಲಭಿಸಿದ ಅತಿ ಹೆಚ್ಚು ರಾಜಧನವಾಗಿದೆ ಎಂದು ತಿಳಿದುಬಂದಿದೆ.
ಕಾರವಾರ ಬಂದರಿನಿಂದ ರಫ್ತು ವಹಿವಾಟು ಬಹುತೇಕ ಸ್ಥಗಿತವಾಗಿದೆ. ಇದರಿಂದ ಬಂದರಿನ ಆದಾಯದಲ್ಲಿ ಭಾರಿ ಇಳಿಕೆ ಕಂಡಿದೆ. ಈ ಮೊದಲು ವಾರ್ಷಿಕ 21 ಕೋಟಿ ರೂ.ವರೆಗೂ ಆದಾಯ ಗಳಿಸಿದ್ದ ಕಾರವಾರ ಬಂದರಿನ ಆದಾಯ ಈಗ ಅರ್ಧಕ್ಕೆ ಇಳಿದಿದೆ. 2025-26 ನೇ ಸಾಲಿನಲ್ಲಿ ಕೇವ. 11.04 ಕೋಟಿ ರೂ. ನೇರ ಆದಾಯ ಬಂದಿತ್ತು. ಈ ಒಪ್ಪಂದದಿAದ 26.5 ಕೋಟಿ ರೂ. ನಿಕ್ಕಿ ಆದಾಯ ಬರಲಿದೆ. ಧಕ್ಕೆಯ ಕೆಲ ಭಾಗವನ್ನು ಕೋಸ್ಟ್ ಗಾರ್ಡ್‌ಗೆ ಲೀಸ್ ನೀಡಲಾಗಿದೆ. ಉಳಿದ ಭಾಗದಲ್ಲಿ ಮೆರಿಟೈಮ್ ಬೋರ್ಡ್ ನೇರವಾಗಿಯೂ ವಹಿವಾಟು ನಡೆಸಬಹುದಾಗಿದೆ.
ಬಂದರಿನ ಧಕ್ಕೆಯನ್ನು ಖಾಸಗಿಗೆ ವಹಿಸುವ ಸಮಬಂಧ ಒಪ್ಪಂದಕ್ಕೆ ಸಹಿ ಆಗಿದೆ. ಅದನ್ನು ಹಸ್ತಾಂತರಿಸುವ ಪ್ರಕ್ರಿಯೆ ಇನ್ನಷ್ಠ ಆಗಬೇಕಿದೆ.