karnikotsava: ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ಅಂಗವಾಗಿ ಗೋರವಪ್ಪ ವಿಶ್ವೇಶ್ವರ ಮಡ್ಲಿ ಬಿಲ್ಲನ್ನು ಏರಿ ಕಾರ್ಣಿಕೋತ್ಸವ ನುಡಿದರು.
- ಚವಡಳ್ಳಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ
- ಕಾರ್ಣಿಕೋತ್ಸವ ನುಡಿದ ಗೊರವಪ್ಪ ವಿಶ್ವೇಶ್ವರ ಮಡ್ಲಿ
- ಮೈಜುಮ್ಮೆನ್ನುವಂತೆ ಮಾಡಿದ ಸರಪಳಿ ಹರಿಯುವ ದೃಶ್ಯ.
ಮುಂಡಗೋಡ: ಈ ಬಾರಿ ಮಳೆ ಬೆಳೆ ಸಂಪಾದೀತಲೇ ಪರಾಕ್..! (karnikotsava)
ಇದು ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಕೇಳಿಬಂದ ದೈವವಾಣಿ (karnikotsava) ಕಾರ್ಣಿಕೋತ್ಸವ...
ಇದು ತಾಲೂಕಿನಲ್ಲಿ ನಡೆಯುವ ದೊಡ್ಡ ಜಾತ್ರೆಯಾಗಿದ್ದರಿಂದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.
ಮಧ್ಯಾಹ್ನ 12.40ಕ್ಕೆ ಚವಡಳ್ಳಿ ಗ್ರಾಮದ ಮಧ್ಯದಲ್ಲಿರುವ ಶಿವಪ್ಪಜ್ಜ ಕೊಣನ ಕೇರಿ ಎಂಬುವರ ಮನೆ ಎದುರಿಗೆ ಕಾರ್ಣಿಕೋತ್ಸವ ನಡೆಯಿತು. ಗೋರವಪ್ಪ ವಿಶ್ವೇಶ್ವರ ಮಡ್ಲಿ ಬಿಲ್ಲನ್ನು ಏರಿ ‘ಮಳೆ ಬೆಳೆ ಸಂಪಾದೀತಲೇ ಪರಾಕ್’ ಎಂದು ಕಾರಣಿಕ ನುಡಿದರು. ಇದರ ಅರ್ಥ ಈ ವರ್ಷ ಉತ್ತಮ ಮಳೆಯಾಗಿ ನೆಮ್ಮದಿಯ ಬೇಳೆ ಬರಲಿದೆ. ಅನ್ನದಾತನ ಕಷ್ಟಗಳು ದೂರ ಸರಿಯಲಿವೆ. ರೈತನಿಗೆ ಈ ವರ್ಷ ಮಳೆ ಬೆಳೆ ಕೈ ಹಿಡಿಯಲಿದೆ ಎನ್ನುವುದು ಕಾಣಿಕದ ಅರ್ಥ ಎಂದು ಗೂರವಪ್ಪಜ್ಜರು ವಿವರಿಸಿದರು. ಇಲ್ಲಿ ನಡೆಯುವ ಕಾರಣಿಕದಿಂದ ಒಂದು ವರ್ಷದ ಭವಿಷ್ಯ ಇರುತ್ತದೆ.
ನಂತರ 1-15 ಕ್ಕೆ ದೇವಾಲಯದ ಬಳಿಯ ಕಲ್ಲಿನ ಮೂರ್ತಿಗೆ ಕಬ್ಬಿಣದ ಸರಪಳಿಗಳನ್ನು ಕಟ್ಟಿ ಹರಿಯಲಾಯಿತು. ಇದೇ ವೇಳೆ ಭಕ್ತರು ನಾಲಿಗೆ ಮೇಲೆ ಶಸ್ತ್ರಪವಾಡ, ಶಿವದಾರದ ಪವಾಡ ಮೆರೆದರು. ನಂತರ ದೇವಸ್ಥಾನದ ಎದುರಿಗೆ ಇರುವ ಕಲ್ಲಿನ ಮೂರ್ತಿಯ ಎದುರು ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಹಿರಿಯ ಗೊರವಪ್ಪರ ಮಾರ್ಗದರ್ಶನದಲ್ಲಿ ಏಳು ಕೋಟಿ ಏಳು ಕೋಟಿ ಎಂದು ಜಯಘೋಷಗಳನ್ನು ಕೂಗುತ್ತಾ ಸರಪಳಿ ಕಟ್ಟಿದ ಕಲ್ಲಿನ ಮೂರ್ತಿಯ ಪ್ರದಕ್ಷಿಣೆ ಹಾಕಿದರು. ನಂತರ ಕ್ಷಣಮಾತ್ರದಲ್ಲಿ ಭಕ್ತರು ಕಲ್ಲಿನ ಮೂರ್ತಿಗೆ ಕಟ್ಟಿದ್ದ ಆರು ಸರಪಳಿಗಳನ್ನು ಹರಿದು ದೈವ ಪರಾಕಾಷ್ಠೆ ಮೆರೆದರು. ಈ ವೇಳೆ ಸರಪಳಿ ಹರಿದ ಕೆಲ ಭಕ್ತರು ಕ್ಷಣಕಾಲ ದೇವರನ್ನು ನೆನೆಯುತ್ತ ಕುಸಿದು ಬಿದ್ದರು. ಕೂಡಲೇ ಹಳದಿ ಬಂಡಾರ ಮುಖಕ್ಕೆ ಹಚ್ಚಿ ದೇವಸ್ಥಾನದ ಮುಂಬದಿಯಲ್ಲಿ ಕುಳ್ಳಿರಿಸದ ನಂತರ ಭಕ್ತರು ಸುಧಾರಿಸಿಕೊಂಡರು.
ಸರಪಳಿ ಹರಿಯುವ ದೃಶ್ಯವನ್ನು ನೋಡಲು ಭಕ್ತರು ಆಲದಮರದ ಮೇಲೆ, ದೇವಸ್ಥಾನದ ಆವರಣ ಸೇರಿದಂತೆ ಇತರೆಡೆ ನಿಂತು ರೋಮಾಂಚನ ದೃಶ್ಯವನ್ನು ಕಣ್ತುಂಬಿಕೊಂಡರು. ಮೈಲಾರಲಿಂಗೇಶ್ವರ ಅನೇಕ ಭಕ್ತರು ದೇವಸ್ಥಾನದ ಆವರಣದಲ್ಲಿ ಮೈಗೆ ಛಡಿಯಿಂದ ಬಾರಿಸಿಕೊಳ್ಳುತ್ತ ನೆರೆದ ಭಕ್ತರ ಮೈಜುಮ್ಮೆನ್ನುವಂತೆ ಮಾಡಿದರು.