ಕರ್ನಾಟಕ ನೌಕಾ ವಲಯ ಮುಖ್ಯಸ್ಥ ವಿಕ್ರಂ ಮೆನನ್
ಕಾರವಾರ: ನೌಕಾಸೇನೆಯ ಮಾಹಿತಿ ಶತ್ರು ರಾಷ್ಟ್ರಗಳಿಗೆ ಸೋರಿಕೆಯಾಗುವುದನ್ನು ತಡೆಯಲು ಸಾಕಷ್ಟು ಕಠಿಣ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್ ಹೇಳಿದರು.
ನೌಕಾ ದಿನಾಚರಣೆಯ ಅಂಗವಾಗಿ ಮಾಧ್ಯಮ ಪ್ರತಿನಿಧಿಗಳ ಜತೆ ಗುರುವಾರ ಮಾತನಾಡಿದ ಅವರು, ನೌಕಾ ಸೇನೆಯ ಸಿಬ್ಬಂದಿಯ ಮೇಲೆ ನಿರಂತರ ನಿಗಾ ಇಡಲಾಗಿದೆ. ಅವರಿಗೆ ಸಾಮಾಜಿಕ ಜಾಲತಾಣಗಳ ಬಳಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ ಹನಿ ಟ್ರಾಪ್ ನಂಥ ಘಟನೆಗಳಿಗೆ ಒಳಗಾಗದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಹೊರ ಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುವ ನೌಕರರ ದಾಖಲೆಗಳ ಪರಿಶೀಲನೆ ಪ್ರತಿ ತಿಂಗಳು ನಡೆಯಿತ್ತದೆ. ಅಲ್ಲದೇ, ಅವರ ಬಗ್ಗೆ ಅವರ ಮೂಲ ಊರಿನ ಪೊಲೀಸರಿಂದಲೂ ವರದಿ ಪಡೆಯಲಾಗುತ್ತದೆ ಎಂದರು.
ಕಾರವಾರ ನೌಕಾನೆಲೆಯು ಭಾರತೀಯ ನೌಕಾಸೇನೆಯಲ್ಲಿ ಮಹತ್ವದ ಪಾತ್ರ ಹೊಂದಿದೆ. ದೇಶದ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ಇಲಾಖೆಯ ಜತೆ ಚರ್ಚೆ:
ಮೀನುಗಾರರ ಸಹಕಾರ ಇದ್ದರೆ ಮಾತ್ರ ದೇಶದ ರಕ್ಷಣೆ ಸಾಧ್ಯ. ದೇಶದ ಆರ್ಥಿಕತೆಗೆ ಮೀನುಗಾರಿಕೆಯ ದೊಡ್ಡ ಕೊಡುಗೆ ಇದೆ. ಕದಂಬ ನೌಕಾನೆಲೆಯಲ್ಲಿ ಸ್ಥಳೀಯ ಮೀನುಗಾರರು ಹಾಗೂ ನೌಕಾ ಸಿಬ್ಬಂದಿಯ ಜತೆ ಕೆಲವು ಗೊಂದಲ ಇರುವುದು ಗೊತ್ತಾಯಿತು. ಈ ಹಿನ್ನೆಲಯಲ್ಲಿ ನವೆಂಬರ್ 15 ರಂದು ಬೆಂಗಳೂರಿನಲ್ಲಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ನೌಕಾನೆಲೆಯ ವ್ಯಾಪ್ತಿಯ ಸಮೀಪ ಮೀನುಗಾರಿಕೆ ನಡೆಸಲು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದೇವೆ. ಆದರೆ, ಭದ್ರತೆಯ ದೃಷ್ಟಿಯಿಂದ ನೌಕಾನೆಲೆಯ ವ್ಯಾಪ್ತಿಯ ಒಳಗೆ ಮೀನುಗಾರಿಕೆ ನಡೆಸಲು ಸಾಧ್ಯವಿಲ್ಲ. ಯುದ್ಧ ಹಡಗು ಓಡಾಡುವ ದಾರಿಯಲ್ಲಿ ಮೀನುಗಾರರು ಬಲೆ ಹಾಕಿದಲ್ಲಿ ಸಮಸ್ಯೆಯಾಗಲಿದೆ ಎಂದರು. ಏನೇ ಸಮಸ್ಯೆ ಇದ್ದರೂ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ಸ್ಥಳೀಯ ಗ್ರಾಮಗಳಲ್ಲಿ ಸಂವಾದ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಸೀಬರ್ಡ್ ಎರಡನೇ ಹಂತದ ಕಾಮಗಾರಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಕುರಿತೂ ಚರ್ಚೆ ನಡೆದಿದೆ ಎಂದರು.
ನೌಕಾ ದಿನಾಚರಣೆಯ ಅಂಗವಾಗಿ ಕಾರವಾರ ನೌಕಾನೆಲೆಯಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಸುತ್ತಲಿನ ಊರುಗಳಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸಾಗರ ಬಂಧು
ಶ್ರೀಲಂಕಾದಲ್ಲಿ ಬಿರುಗಾಳಿಯಿಂದ ಉಂಟಾದ ತೊಂದರೆಗೆ ನೆರವು ನೀಡುವಲ್ಲಿ ಕದಂಬ ನೌಕಾನೆಲೆ ಮಹತ್ವದ ಪಾತ್ರ ವಹಿಸಿದೆ ಎಂದು ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್ ತಿಳಿಸಿದರು.
ಸಾಗರ ಬಂಧು ಹೆಸರಿನ ನೆರವಿನ ಕಾರ್ಯಕ್ರಮಕ್ಕಾಗಿ ಕಾರವಾರದಿಂದ ಯುದ್ಧ ವಿಮಾನ ವಾಹಕ ನೌಕೆ ಐಎನ್ ಎಸ್ ವಿಕ್ರಾಂತ್ ಹಾಗೂ ಉದಯಗಿರಿ ನೌಕೆಗಳು ಶ್ರೀಲಂಕಾ ಕೋಲಂಬೋಕ್ಕೆ ತೆರಳಿವೆ. ತೊಂದರೆಗೀಡಾದವರ ರಕ್ಷಣೆಗೆ ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ. ಆಹಾರ ಧಾನ್ಯ ಬಟ್ಟೆ ಮುಂತಾದ ನೆರವನ್ನು ನೀಡಲಾಗಿದೆ. ಶ್ರೀಲಂಕಾಕ್ಕೆ ಮೊದಲ ನೆರವು ನೀಡಿದ್ದು, ಭಾರತೀಯ ನೌಕಾಸೇನೆ ಎಂದರು.