ಮಂಕಾಳ ವೈದ್ಯ  
ಉತ್ತರ ಕನ್ನಡ

ಸಚಿವ ಸಂಪುಟ ವಿಸ್ತರಣೆ ಉತ್ತರ ಕನ್ನಡಕ್ಕೆ ಶೂನ್ಯ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಮೊದಲು ಪಟ್ಟಿಯಲ್ಲಿ ಹೆಸರು ನಂತರ ಬದಲು ಮಂಕಾಳ ವೈದ್ಯರಿಗೆ ಅವಮಾನ
  • ಉತ್ತರ ಕನ್ನಡದ ಕಾಂಗ್ರೆಸಿಗರಿಂದಲೇ ಅಸಮಾಧಾನ
ಕಾರವಾರ:

ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಉತ್ತರ ಕನ್ನಡಕ್ಕೆ ಮಂತ್ರಿ ಸ್ಥಾನ ದೊರಕಿಲ್ಲ. ಎಐಸಿಸಿ ಪಟ್ಟಿಯಲ್ಲಿ ಹೆಸರು ಬಂದರೂ ಸಚಿವ ಸ್ಥಾನದಿಂದ ವಂಚಿತರಾದ ಶಾಸಕ ಮಂಕಾಳ ವೈದ್ಯ ಅವಮಾನ ಅನುಭವಿಸುವಂತಾಗಿದೆ. ಅಽಕೃತವಾಗಿ ನಾಲ್ವರು ಶಾಸಕರು ಇದ್ದರೂ ಜಿಲ್ಲೆಗೆ ಮಂತ್ರಿಗಿರಿ ಸಿಗದ ಬಗ್ಗೆ ಇಲ್ಲಿನ ಕಾಂಗ್ರೆಸ್ ವಲಯದಲ್ಲೇ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

ಎಐಸಿಸಿ ಮೊದಲು ಕಳುಹಿಸಿದ ಪಟ್ಟಿಯಲ್ಲಿ ಭಟ್ಕಳ ಶಾಸಕ ಮಂಕಾಳ ವೈದ್ಯ ಹೆಸರಿತ್ತು. ಕೆಲವೇ ಹೊತ್ತಿನಲ್ಲಿ ಪಟ್ಟಿ ಬದಲಾಗಿದ್ದು, ಅಲ್ಲಿ ವೈದ್ಯ ಬದಲು ದಾವಣಗೆರೆಯ ಎಸ್.ಎಸ್.ಮಲ್ಲಿಕಾರ್ಜುನ ಹೆಸರು ಸೇರಿಕೊಂಡಿತ್ತು. ಈ ಗೊಂದಲದ ನಡುವೆ ಮಂಕಾಳ ವೈದ್ಯ ಸಿಎಂ ಮನೆಗೆ ತೆರಳಿ ಚರ್ಚಿಸಿ, ಬೇಸರದ ಮುಖದೊಂದಿಗೆ ವಾಪಸಾಗಿರುವುದು ಕಂಡುಬಂತು. ಮಂಕಾಳ ವೈದ್ಯ ಸಚಿವರಾಗುತ್ತಾರೆ ಎಂದು ಸಂಭ್ರಮಾಚರಣೆಗೆ ಸಿದ್ಧರಾಗಿದ್ದ ಅವರ ಅಭಿಮಾನಿಗಳು ತೀವ್ರ ದುಃಖ ಅನುಭವಿಸುವಂತಾಯಿತು.
ಸರ್ಕಾರದ ನಡೆಯ ಬಗ್ಗೆ ಕಾಂಗ್ರೆಸ್ ಬೆಂಬಲಿತ ಮೀನುಗಾರ ಮುಖಂಡರು ಅಸಮಾಧಾನ ಹೊರ ಹಾಕಿದ್ದು, ಟ್ವೀಟ್ ಅಭಿಯಾನ ಪ್ರಾರಂಭಿಸಿದ್ದಾರೆ. ಮೀನುಗಾರ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ ಎಂದು ಆರೊಪಿಸುತ್ತಿದ್ದು, ಇದಕ್ಕೆ ಹೋರಾಟ ಮಾಡುತ್ತೇವೆ. ತಕ್ಕ ಉತ್ತರ ಕೊಡುತ್ತೇವೆ ಎಂದು ಎಚ್ಚರಿಸುತ್ತಿದ್ದಾರೆ.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬಿಜೆಪಿಯಿಂದ ಹೊರ ಬಿದ್ದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಸಹ ಕಾಂಗ್ರೆಸ್ ಬೆಂಬಕ್ಕೆ ನಿಂತಿದ್ದಾರೆ. ಶಿರಸಿ ಶಾಸಕ ಭೀಮಣ್ಣ ನಾಯ್ಕ ತಮ್ಮ ಅಳಿಯ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಸಿಗಲಿ ಎಂಬ ಇಚ್ಛೆ ವ್ಯಕ್ತಪಡಿಸಿ, ಅವರ ಪರವಾಗಿ ಲಾಬಿ ಮಾಡಿದ್ದರು. ಭಟ್ಕಳದ ಮಂಕಾಳ ವೈದ್ಯ, ಕಾರವಾರದ ಸತೀಶ ಸೈಲ್ ಹಾಗೂ ಹಳಿಯಾಳದ ಆರ್.ವಿ.ದೇಶಪಾಂಡೆ ಸಚಿವ ಸ್ಥಾನದ ರೇಸ್‌ನಲ್ಲಿದ್ದರು.
ಅಕ್ರಮ ಗಣಿಗಾರಿಕೆ ಹಾಗೂ ಇಡಿ ಪ್ರಕರಣಗಳ ತೂಗುಗತ್ತಿ ಇರುವ ಕಾರಣ ಶಾಸಕ ಸತೀಶ ಸೈಲ್‌ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇರಲಿಲ್ಲ. ಆರ್.ವಿ.ದೇಶಪಾಂಡೆ ಹಾಗೂ ಸಿಎಂ ಡಿಕೆಶಿ ನಡುವೆ ಅಷ್ಟಕ್ಕಷ್ಟೇ ಎಂಬಂಥ ಸಂಬಂಧ ಇರುವುದರಿಂದ ಆರ್‌ವಿಡಿಗೂ ಮಂತ್ರಿ ಸ್ಥಾನ ಕಷ್ಟ ಎಂಬ ಪರಿಸ್ಥಿತಿ ಇತ್ತು. ಡಿಕೆಶಿ ಆಪ್ತರಾಗಿರುವ ಮಂಕಾಳ ವೈದ್ಯರಿಗೆ ಸಚಿವಗಿರಿ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಎಲ್ಲವೂ ಹುಸಿಯಾಗಿದೆ.

ಮೂವರ ಜಗಳ

`ಇಬ್ಬರ ಜಗಳ ಮೂರನೇಯವನಿಗೆ ಲಾಭ' ಎಂಬ ಗಾದೆ ಮಾತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರ ಜಗಳ ನಾಲ್ಕನೇಯವನಿಗೆ ಲಾಭವಾಯಿತೇ ಎಂಬ ವಿಶ್ಲೇಷಣೆಗಳೂ ಶುರುವಾಗಿವೆ. ಹಿರಿಯ ಶಾಸಕ ಆರ್.ವಿ.ದೇಶಪಾಂಡೆ, ನಿಕಟಪೂರ್ವ ಸಚಿವ ಮಂಕಾಳ ವೈದ್ಯ ಹಾಗೂ ಕೆಎಸ್‌ಎಂಸಿಎ ಅಧ್ಯಕ್ಷ ಸತೀಶ ಸೈಲ್ ಸಚಿವ ಸ್ಥಾನದ ತೀವ್ರ ಆಕಾಂಕ್ಷಿಗಳಾಗಿದ್ದರು. ಒಂದುಕಾಲದಲ್ಲಿ ನಿಕಟ ಸ್ನೇಹಿತರಾಗಿದ್ದ ವೈದ್ಯ ಹಾಗೂ ಸೈಲ್ ಈಗ ಪರಸ್ಪರ ಮುನಿಸಿಕೊಂಡು ಸಚಿವ ಸ್ಥಾನಕ್ಕಾಗಿ ಪೈಪೋಟಿ ಆರಂಭಿಸಿದ್ದರು. ಸೈಲ್ ಡಿ.ಕೆ.ಶಿವಕುಮಾರ್ ಹಿಂದೆಯೇ ಓಡಾಟ ನಡೆಸಿದ್ದರು.ಮಂಕಾಳ ಡಿಕೆಶಿ ಆಪ್ತರಾಗಿದ್ದು, ತಮಗೆ ಸಚಿವ ಸ್ಥಾನ ಖಚಿತ ಎಂದು ನಿಶ್ಚಿಂತೆಯಿಂದ ಸ್ವ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು. ಇನ್ನೊಂದೆಡೆ ಹೈಕಮಾಂಡ್‌ವರೆಗೂ ಪ್ರಭಾವ ಬೀರುವ ಯತ್ನ ಮಾಡಿದ್ದ ಮಾಹಿತಿ ಇತ್ತು. ಆದರೆ, ಈಗ ಒಬ್ಬರಿಗೂ ಲಭಿಸಿಲ್ಲ. ಮೂವರ ಪೈಪೋಟಿಯ ಲಾಭ ದಾವಣಗೆರೆ ಜಿಲ್ಲೆಗಾಯಿತೇ ಎಂಬ ಚರ್ಚೆಯೂ ಇದೆ.

ಉಸ್ತುವಾರಿ ಯಾರಿಗೆ..?

ಕಾಂಗ್ರೆಸ್ ಸರ್ಕಾರದ ಅವಽಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಬೇರೆಯವರಿಗೆ ನೀಡಬೇಕಾದ ಪರಿಸ್ಥಿತಿ ಬಂದಿದೆ. ಯಾವ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗುತ್ತದೆ ಎಂಬ ಚರ್ಚೆ ಪ್ರಾರಂಭವಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲ ತಿಂಗಳು ಬೆಳಗಾವಿಯ ಶಶಿಕಲಾ ಜೊಲ್ಲೆ , ನಂತರ ಸುಮಾರು ಒಂದುವರೆ ವರ್ಷ ಕೋಟ ಶ್ರೀನಿವಾರ ಪೂಜಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ಇಬ್ಬರನ್ನು ಬಿಟ್ಟರೆ ಬೇರೆ ಜಿಲ್ಲೆಯವರು ಜಿಲ್ಲೆಯ ಉಸ್ತುವಾರಿಯಾಗಿದ್ದ ಅವಽ ತೀರ ಕಡಿಮೆ.

ಯೋಜನೆಗಳ ಜಾರಿ ತಯಾರಿಯೇ ..?

ಕೇಣಿ ವಾಣಿಜ್ಯ ಬಂದರು, ಬೇಡ್ತಿ ವರದಾ ನದಿ ಜೋಡಣೆ, ಶರಾವತಿ ಪಂಪ್ ಸ್ಟೋರೇಜ್ ಹೀಗೆ ಸಾವಿರಾರು ಕೋಟಿ ರೂ.ಗಳ ಕೆಲವು ಬೃಹತ್ ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಅವರೂ ಈ ಎಲ್ಲ ಯೋಜನೆಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ಆದರೆ, ಸ್ಥಳೀಯವಾಗಿ ಈ ಪ್ರೊಜೆಕ್ಟ್ಗಳಿಗೆ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಅವುಗಳ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಅತ್ತ ಜನರ ಜೊತೆಯೂ ನಿಲ್ಲದೆ, ಸರ್ಕಾರದ ಪರ ಮಾತನಾಡಲೂ ಆಗದೇ. ಘಟ್ಟಿ ನಿಲುವಿಲ್ಲದೇ ಮೌನ ವಹಿಸಿರುವುದು ಕಂಡುಬರುತ್ತಿದೆ. ಜಿಲ್ಲೆಯ ಶಾಸಕರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಇಟ್ಟುಕೊಂಡು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಯೋಜನೆಗಳ ಜಾರಿ ಪ್ರಕ್ರಿಯೆ ಕಷ್ಟ ಸಾಧ್ಯ. ಬೇರೆ ಜಿಲ್ಲೆಯ ಸಚಿವರನ್ನು ಜಿಲ್ಲೆಯ ಉಸ್ತುವಾರಿ ನೇಮಿಸಿದಲ್ಲಿ ಅವರು ಜನರಿಗೆ ಉತ್ತರದಾಯಿಯಾಗಿರಬೇಕಿಲ್ಲ. ಅಧಿಕಾರಿಗಳ ಮೂಲಕ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂಬ ಮುಂದಾಲೋಚನೆಯೂ ಇದ್ದೀತು ಎಂಬ ಮಾತುಗಳೂ ರಾಜಕೀಯ ವಲಯದಲ್ಲಿವೆ.