ಕಾರವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾರವಾರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಖಾಲಿ ಕೊಡಗಳನ್ನು ಹಿಡಿದು ಧರಣಿ ಕುಳಿತ ಕಾರ್ಯಕರ್ತರು ಕಾವೇರಿ ನಮ್ಮ ಹಕ್ಕು ಎಂದು ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಽಕಾರಿ ಕಚೇರಿಯ ಶಿರಸ್ತೆದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಅಕ್ಷಯ ಎಸ್.ಬಿ.ಮಾತನಾಡಿ, ಕರ್ನಾಟಕದಲ್ಲಿಯೇ ಬರಗಾಲವಿದೆ. ಕನ್ನಂಬಾಡಿ ಅಣೆಕಟ್ಟೆ ಖಾಲಿಯಾಗಿದೆ. ಕುಡಿಯಲು ಕೃಷಿಗೆ ನೀರಿನ ಅಭಾವವಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಹರಿಸಬಾರದು. ರಾಜ್ಯ ಸರ್ಕಾರ ರಾಜ್ಯದ ಹಿತಕ್ಕೆ ಮೊದಲ ಆದ್ಯತೆ ನೀಡಬೇಕು.
ಹಾಗೊಮ್ಮೆ ರಾಜ್ಯ ಸರ್ಕಾರ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಿದ್ದೇ ಆದರೆ, ರಾಜ್ಯಾದ್ಯಂತ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಕರವೇ ಪದಾಧಿಕಾರಿಗಳಿದ್ದರು.