ಸೋನು ನಿಗಮ್ ಕರಾವಳಿ ಉತ್ಸವದಲ್ಲಿ ಹಾಡಿದರು
ಕಾರವಾರ:ಬುಧವಾರ ಕರಾವಳಿ ಉತ್ಸವದ ವೇದಿಕೆಯಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಅವರ ಹಾಡುಗಳು ಜನರನ್ನು ಹುಚ್ಚೆದ್ದು ಕುಣಿಸಿತು. ನಿರಂತರವಾಗಿ ಎರಡು ತಾಸು ಸೋನು ನಿಗಮ್ ಅವರು ಕನ್ನಡ ಹಾಗೂ ಹಿಂದಿ ಹಾಡುಗಳ ಸರಣಿಯನ್ನೇ ತಮ್ಮ ಕಂಠ ಸಿರಿಯಲ್ಲಿ ತೆರೆದಿಟ್ಟರು.
ಪ್ರೇಕ್ಷಕರಿಂದ ಮುಂದಿನ ಸಾಲು ಹಾಡಿಸಿ ಅವರನ್ನು ಹುರಿದುಂಬಿಸಿದರು. ಇಡೀ ಕಡಲ ತೀರ ತುಂಬಿ ತುಳುಕಿತ್ತು. ಪೊಲೀಸರು ಜನರನ್ನು ನಿಯಂತ್ರಣ ಮಾಡಲು ಹರಸಾಹಸಪಡಬೇಕಾಯಿತು.
`ನಾನು ಕಳೆದ 30 ವರ್ಷದಲ್ಲಿ ಕನ್ನಡದ ಹಲವು ಹಾಡುಗಳನ್ನು ಹಾಡಿದ್ದೇನೆ. ನಾನು ಯಾವುದೋ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಅನ್ನಿಸುತ್ತದೆ. ಇದರಿಂದ ಕನ್ನಡದ ಇಷ್ಟೊಂದು ಹಾಡುಗಳನ್ನು ಹಾಡಲು ಅವಕಾಶ ಸಿಕ್ಕಿದೆ ಎಂದು ಸೋನು ನಿಗಮ್ ಹೇಳಿದರು.
ತಮ್ಮ ಹಾಡಿನ ನಡುವೆ ಮಾತನಾಡಿದ ಅವರು ಎಷ್ಟು ಜನ ಕನ್ನಡಿಗರಿದ್ದೀರಿ ಎಂದು ಕೈ ಎತ್ತಿಸಿ ತಿಳಿದುಕೊಂಡು ನಂತರ ಮಾತನಾಡಿದರು. `ನಾನು ಹಾಡಿದ್ದ ಹಿಂದಿಗಿಂತ ಕನ್ನಡದ ಉತ್ತಮ ಹಾಡುಗಳಿವೆ. ನಾವು ಮುಂಬೈನಲ್ಲಿ ಇರುತ್ತೇವೆ. ಅಲ್ಲಿ ಹಿಂದಿಯನ್ನೂ ಜನ ಬಹಳ ಕಷ್ಟದಿಂದ ಮಾತನಾಡುತ್ತಾರೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ನಾನು ಕನ್ನಡದ ಯಾವುದೇ ಹಾಡನ್ನು ಹಾಡುವಾಗ ಪ್ರತಿ ಶಬ್ದದ ಅರ್ಥ ತಿಳಿದುಕೊಂಡು ಬಹಳ ಗೌರವದಿಂದ ಹಾಡುತ್ತೇನೆ. ಹಾಡಿನ ಅರ್ಥಕ್ಕೂ ನನ್ನ ಭಾವನೆಗೂ ವ್ಯತ್ಯಾಸ ಬರಬಹುದು. ಕನ್ನಡವನ್ನು ಬಹಳ ಗೌರವದಿಂದ ಕಾಣುತ್ತೇನೆ ಎಂದರು.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಕನ್ನಡಕ್ಕೆ ಸೋನು ನಿಗಮ್ ಅವಮಾನ ಮಾಡಿದ ಬಗ್ಗೆ ಬಹಳ ಆಕ್ಷೇಪ ವ್ಯಕ್ತವಾಗಿತ್ತು. ನಂತರ ಅವರು ಕ್ಷಮೆ ಕೋರಿದ್ದರು. ಕರಾವಳಿ ಉತ್ಸವದಲ್ಲೂ ಸೋನು ನಿಗಮ್ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಅದಾದ ನಂತರ ಅವರು ರಾಜ್ಯದಲ್ಲಿ ಯಾವುದೇ ಬಹಿರಂಗ ವೇದಿಕೆಯಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಬುಧವಾರ ಸಿಕ್ಕಿದ ವೇದಿಕೆಯಲ್ಲಿ ಅವರು ತಮ್ಮ ಸ್ಪಷ್ಟನೆ ನೀಡಿದರು.