ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕದಂಬ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೇಕ್ರಿ ರಮೇಶ, ರಮೇಶ ಹನುಮಂತಪ್ಪ ಹಡಗದ, ರಮೇಶ ಹೆಗಡೆ, ಚಂದ್ರಶೇಖರ ನಾಯ್ಕ, ಸಿ.ಎನ್.ಹೆಗಡೆ, ನಾಗರಾಜ ಭಟ್ಟ, ಉದಯ ಕಾನಳ್ಳಿ, ಗಂಗಾಧರ ಕೊಳಗಿ ಇತರರಿದ್ದರು. 
ಉತ್ತರ ಕನ್ನಡ

ಕನ್ನಡದ ಜಾಗೃತಿ ಕಾರ್ಯ ಶ್ಲಾಘನೀಯ

ವಿನಯ ಆಶೋಕ ನಾಯ್ಕ
ಸಿದ್ದಾಪುರ: ಹಣ ಮಾಡುವುದು ಮುಖ್ಯವಲ್ಲ. ದಾನ ಮಾಡಬೇಕು. ದೇವರ ಸೇವೆ ಮಾಡಬೇಕು. ಸಂಘಟನೆ ಪ್ರಾರಂಭಿಸುವುದು ಸುಲಭ ಆದರೆ, ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಅದನ್ನು ಮುಂದುವರೆಸಿಕೊಂಡು ಹೋಗುವುದು ಮುಖ್ಯ. ಕದಂಬ ಸೈನ್ಯ ಕನ್ನಡ ಸಂಘಟನೆ ಉತ್ತಮವಾದ ಕಾರ್ಯವನ್ನು ನಡೆಸುವ ಮೂಲಕ ಕನ್ನಡದ ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಹಿರೇಕೇರೂರಿನ ಸಾಮಾಜಿಕ ಕಾರ್ಯಕರ್ತ ರಮೇಶ ಹನುಮಂತಪ್ಪ ಹಡಗದ ಹೇಳಿದರು.
ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದ ಸಭಾಭವನದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕದಂಬ ಸೈನ್ಯ ಕನ್ನಡ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಅಧ್ಯಕ್ಷತೆವಹಿಸಿ ಮಾತನಾಡಿ, ನಾವು ಕನ್ನಡಿಗರು ಎನ್ನುವುದನ್ನು ಮರೆತಿದ್ದೇವೆ. ಮೊದಲು ನಾವು ಕನ್ನಡದವರಾಗಬೇಕು. ನಮ್ಮ ಭಾಷೆಯ ಬಗ್ಗೆ ನಮ್ಮ ನೆಲದ ಬಗ್ಗೆ ನಾವು ಜಾಗೃತರಾಗಿರಬೇಕು ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಹಾರ್ಸಿಮನೆ, ಮಾಜಿ ಅಧ್ಯಕ್ಷ ಗಂಗಾಧರ ಕೊಳಗಿ, ತಾಲೂಕು ಭಾರತ ಸೇವಾ ದಳದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ, ಎಂ.ಪಿ.ಮುಳಗುಂದ ಗದಗ, ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ, ದೇವಾಲಯದ ಉಪಾಧ್ಯಕ್ಷ ಚಿ.ಎನ್. ಹೆಗಡೆ ಗುಂಜಗೋಡ, ಗುತ್ಯಪ್ಪ ಮಾದರ ಬನವಾಸಿ ಹಾಗೂ ವಿವಿಧ ಜಿಲ್ಲೆಯ ಕದಂಬ ಸೈನ್ಯ ಕನ್ನಡ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಬನವಾಸಿ ಸುಧೀರ್ ಆರ್.ನಾಯರ್ ಅವರಿಗೆ ಕದಂಬ ಕಾಕುತ್ಸವರ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವೀರರಾಣಿ ಚೆನ್ನಬೈರಾದೇವಿ, ಕದಂಬ ರಂಗ ರತ್ನ, ಕದಂಬ ರತ್ನ, ಕದಂಬ ಪ್ರಗತಿಪರ ರೈತ, ಕದಂಬ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉದಯಕುಮಾರ ಕಾನಳ್ಳಿ ಬನವಾಸಿ ಪ್ರಾಸ್ತಾವಿಕ ಮಾತನಾಡಿದರು. ಐತಿಹಾಸಿಕ ಕ್ಷೇತ್ರವಾದ ಬನವಾಸಿ ಅಭಿವೃದ್ಧಿ ಪ್ರಾಧಿಕಾರದಂತೆ ಭುವನಗಿರಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಭುವನಗಿರಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬೇಕು ಎಂದು ಗಣ್ಯರು ಆಗ್ರಹಿಸಿದರು.