ಕಾಳಂಗಿ ಸೊಸೈಟಿ ಎದುರು ರೈತರು ಪ್ರತಿಭಟನೆ ಮಾಡಿದರು  
ಉತ್ತರ ಕನ್ನಡ

ಕಾಳಂಗಿ ಸೊಸೈಟಿ ಅವ್ಯವಹಾರದ ಬಗ್ಗೆ ಉತ್ತರ ಕೊಡಿ: ಅಧಿಕಾರಿಗಳಿಗೆ ದುಂಬಾಲು ಬಿದ್ದ ಸದಸ್ಯರು

ಸುಭಾಸ ಹೆಗಡೆ ಧೂಪದಹೊಂಡ
ಶಿರಸಿ: ತಾಲೂಕಿನ ಕಾಳಂಗಿ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾಗದ ಅವ್ಯವಹಾರ ಖಂಡಿಸಿ ನೂರಾರು ರೈತರು ಸಂಘದ ಕಚೇರಿ ಎದುರು ಶುಕ್ರವಾರ ತೀವ್ರ ಪ್ರತಿಭಟನೆ ನಡೆಸಿದರು.
ಗ್ರಾಮದ ಪ್ರಮುಖ ಬಸವರಾಜ ನಂದಿಕೇಶ್ವರಮಠ ಮಾತನಾಡಿ, ಕಾಳಂಗಿ ಸೊಸೈಟಿಯಲ್ಲಿ 8 ರಿಂದ 10 ಕೋಟಿ ರೂ. ಮೇಲ್ಪಟ್ಟು ಅವ್ಯವಹಾರ ಆಗಿರುವ ಸುದ್ದಿ ಹರಡಿದೆ. ಮುಖ್ಯ ಕಾರ್ಯನಿರ್ವಾಹಕನನ್ನು ಬಳಸಿಕೊಂಡು ಹಾಲಿ ಆಡಳಿತ ಮಂಡಳಿಯು ಸದಸ್ಯರಲ್ಲದವರ ಹೆಸರಿನಲ್ಲಿಯೂ ಸಾಲ ತೆಗೆದಿದ್ದಾರೆ ಎಂಬ ಸುದ್ದಿ ಇದೆ. ಠೇವಣಿದಾರರು ಠೇವಣಿಯ ಹಣ ವಾಪಸ್ಸು ಕೇಳಿದರೆ ನೀಡುತ್ತಿಲ್ಲ. ರೈತರ ಬೆವರಿನ ಹನಿಯಿಂದ ಸಹಕಾರಿ ಸಂಘ ಬೆಳೆದಿದೆ. ಸಂಘದಲ್ಲಿ ನಡೆದ ಭ್ರಷ್ಟಾಚಾರ ತನಿಖೆಯಾಗಿ ಕಾನೂನು ಕ್ರಮವಾಗಬೇಕು. ಭ್ರಷ್ಟಾಚಾರದಲ್ಲಿ ಪಾಲ್ಗೊಂಡವರ ಆಸ್ತಿ ಮುಟ್ಟುಗೋಲು ಹಾಕಬೇಕು. ವೈಯಕ್ತಿಕ ಹಿತಾಸಕ್ತಿಯಿಂದ ಸೊಸೈಟಿ ಬಲಿಯಾಗದಂತೆ ನೋಡಿಕೊಳ್ಳಬೇಕು. ಸಮಗ್ರ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು ಅಲ್ಲದೇ ಅವರನ್ನು ಜೈಲಿಗೆ ಕಳುಹಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.
ಕಳೆದ 20 ದಿನದ ಹಿಂದೆ ಸಂಘದ ಆವಾರದಲ್ಲಿ ಪ್ರತಿಭಟಿಸಿದಾಗ ಸಹಕಾರಿ ಸಹಾಯಕ ನಿಬಂಧಕರು ಸ್ಥಳಕ್ಕಾಗಮಿಸಿ, ಪ್ರಾಥಮಿಕ ತನಿಖೆ ನಡೆಸಿ, 7 ದಿನದೊಳಗಡೆ ವರದಿ ನೀಡಲಾಗುತ್ತದೆ ಎಂಬ ಭರವಸೆ ನೀಡಿದ ಪರಿಣಾಮ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿತ್ತು. ಆದರೆ, ಇದುವರೆಗೂ ತನಿಖೆ ವರದಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತ ಮಂಡಳಿಯ 12 ಸದಸ್ಯರ ಮೇಲೆಯೂ ನಮ್ಮ ಆರೋಪವಿದೆ. ಪ್ರತಿ ಸದಸ್ಯರಿಗೂ ಜವಾಬ್ದಾರಿಯಿದೆ. ಹಿಂದಿನ ಆಡಳಿತ ಮೇಲೆ ಆರೋಪ ಮಾಡಿ ಅಽಕಾರಕ್ಕೆ ಬಂದವರು ಭ್ರಷ್ಟಾಚಾರ ಮಾಡಿ ಸಂಘದ ಬಾಗಿಲು ಮುಚ್ಚಲು ಹೊರಟಿದ್ದಾರೆ. ಆಡಳಿತ ಮಂಡಳಿ ಅಮಾನತ್ತಿನಲ್ಲಿಟ್ಟು ತನಿಖೆ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಮಾಜಿ ನಿರ್ದೇಶಕ ಅಕ್ಷಯ ಜಕಲಣ್ಣನವರ್ ಮಾತನಾಡಿ, ಹಿಂದಿನ ಆಡಳಿತ ಮಂಡಳಿಯು ಸಂಘವನ್ನು 17 ಲಕ್ಷ ರೂ. ಲಾಭದಲ್ಲಿ ತಂದಿತ್ತು. ಹಾಲಿ ಆಡಳಿತ ಮಂಡಳಿ ಸಂಘವನ್ನು ಸಾಲಕ್ಕೆ ತಳ್ಳಿದೆ. 8 ಲಕ್ಷ ರೂ.ಠೇವಣಿ ಇಟ್ಟ ಠೇವಣಿದಾರ ಸಹಿ ಮಾಡಿಸಿಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದು ಹೇಳಿ ಬೇರೆಯವರ ಹೆಸರಿನಲ್ಲಿರುವ ಖಾತೆಗೆ 5 ಲಕ್ಷ ರೂ. ಜಮಾ ಮಾಡಿ ಹಣ ದೋಚಿದ್ದಾರೆ. ಆಡಳಿತ ಮಂಡಳಿಯ ಕೆಲ ನಿರ್ದೇಶಕರು ತಮ್ಮ ಚೇಲಾಗಳಿಗೆ ಲಕ್ಷಾಂತರ ರೂ. ಸಾಲ ನೀಡಿದ್ದಾರೆ. ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು ಎಂದರು.
ಸ್ಥಳಕ್ಕಾಗಮಿಸಿದ ಸಹಾಯಕ ಉಪ ನಿಬಂಧಕಿ ಡಾ.ತೇಜಸ್ವಿನಿ ಪ್ರತಿಕ್ರಿಯಿಸಿ, ಸಹಕಾರಿ ಕಾಯ್ದೆ ಪ್ರಕಾರ ಇಲಾಖೆ ಕಾರ್ಯನಿರ್ವಹಿಸಬೇಕು. ಇಲಾಖೆ ಹಂತದಲ್ಲಿ ಪರಿಶೀಲನೆಯಲ್ಲಿದೆ. ಪ್ರಾಥಮಿಕ ವರದಿ ಪಡೆದ ಬಳಿಕ ಸಹಕಾರಿಯ 64 ಕಲಂ ಅಡಿಯಲ್ಲಿ ತನಿಖೆ ಮಾಡುತ್ತೇವೆ. ಮುಂಡಗೋಡ ಸಹಕಾರಿ ಅಭಿವೃದ್ಧಿ ಅಽಕಾರಿಯನ್ನು ತನಿಖಾಽಕಾರಿಯಾಗಿ ನೇಮಕ ಮಾಡಲಾಗಿದೆ. ತನಿಖೆ ಪ್ರಗತಿಯ ವರದಿ ಸಲ್ಲಿಕೆ ಮಾಡಲಿದ್ದಾರೆ. ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಾಹಕರ ಲೋಪ-ದೋಷ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಆಡಳಿತ ಮಂಡಳಿ ಅಮಾನತ್ತು ಮಾಡುವ ಅಽಕಾರ ನಮಗಿಲ್ಲ. ಠೇವಣಿ ಇಟ್ಟ ಹಣ ಲಪಟಾವಣೆಯಾಗಿರುವ ಕುರಿತು ಇಲಾಖೆಯಿಂದ ಅಽಕಾರಿ ನೇಮಿಸಿ, ವಿಚಾರಣೆ ಕೈಗೊಂಡು, ಅನ್ಯಾಯವಾದ ರೈತರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಸಹಾಯಕ ಸಹಕಾರಿ ನಿಬಂಧಕ ಅಜಿತ ಶಿರಹಟ್ಟಿ ಪ್ರತಿಕ್ರಿಯಿಸಿ, ಆಡಳಿತ ಮಂಡಳಿಯು ಸಿಬ್ಬಂದಿ ಅಮಾನತ್ತಿನಲ್ಲಿಟ್ಟಿದ್ದಾರೆ. ಅವರ ಆಸ್ತಿ ಮೇಲೆ ಬೋಜಾ ಹಾಕಿದ್ದಾರೆ. ಸಹಕಾರಿ ಕಲಂ 64 ಅಡಿಯಲ್ಲಿ ತನಿಖೆ ನಡೆಸಲು ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಆಪಾದನೆ ಸಾಬಿತಾದರೆ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
"

ಸಂಘದ ನಡೆಯುವ ಕಾರ್ಯಚಟುವಟಿಕೆ ನಮ್ಮ ಗಮನಕ್ಕೆ ತರುತ್ತಿಲ್ಲ. ನಾಲ್ಕೈದು ನಿರ್ದೇಶಕರು ಮಾತ್ರ ಎಲ್ಲ ವ್ಯವಹಾರದಲ್ಲಿರುತ್ತಾರೆ.

ಸುರೇಶ ಜಕಲಣ್ಣನವರ, ಹಾಲಿ ನಿರ್ದೇಶಕ