Kaiga_Atomic_Power_Station 
ಉತ್ತರ ಕನ್ನಡ

ಕೈಗಾ 1 ನೇ ಘಟಕ ಕ್ರಿಟಿಕಾಲಿಟಿ ಹಂತದಲ್ಲಿ

ಕಾರವಾರ: ಆರುನೂರು ದಿನಗಳ ನವೀಕರ ಕಾರ್ಯದ ಬಳಿಕ ಕೈಗಾ ಅಣು ವಿದ್ಯುತ್ ಕೇಂದ್ರದ 1 ನೇ ಘಟಕವು ವಿದ್ಯುತ್ ಉತ್ಪಾದನೆ ಮರು ಪ್ರಾರಂಭಿಸಲು ಸಿದ್ಧವಾಗಿದ್ದು, ನ.22 ರಂದು ಕ್ರಿಟಿಕಾಲಿಟಿ ಹಂತವನ್ನು ಯಶಸ್ವಿಯಾಗಿ ತಲುಪಿದೆ.

ಅಣು ವಿದ್ಯುತ್ ಘಟಕದಲ್ಲಿ ಯುರೇನಿಯಂ ಇಂಧನ ಭರ್ತಿ ಮಾಡಿ, ಘಟಕ ಪ್ರಾರಂಭಿಸಿದ ಬಳಿಕ ಅಣುಗಳ ವಿದಳನ ಪ್ರಕ್ರಿಯೆ ಪ್ರಾರಂಭವಾಗುವುದಕ್ಕೆ ಕ್ರಿಟಿಕಾಲಿಟಿ ಎನ್ನಲಾಗುತ್ತದೆ. ಆ ಹಂತ ಯಶಸ್ವಿಯಾಗಿದ್ದು, ಇನ್ನು ಒಂದು ವಾರದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಎನ್‌ಪಿಸಿಐಎಲ್ ಪ್ರಕಟಣೆ ತಿಳಿಸಿದೆ.

2000 ನೇ ಇಸವಿಯ ಸೆಪ್ಟೆಂಬರ್ 26 ರಂದು 1 ನೇ ಘಟಕವು ಮೊದಲ ಬಾರಿಗೆ ಕ್ರಿಟಿಕಾಲಿಟಿ ಹಂತ ತಲುಪಿತ್ತು. ಅದೇ ಅಕ್ಟೋಬರ್ 12 ರಂದು ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್‌ಗೆ ಹಸ್ತಾಂತರ ಪ್ರಾರಂಭಿಸಲಾಗಿತ್ತು. ನವೆಂಬರ್ 16 ರಂದು ವಾಣಿಜ್ಯಿಕ ವಿದ್ಯುತ್ ಉತ್ಪಾದನೆ ಪ್ರಾರಂಭಿಸಿತ್ತು. 2025 ರ ಏಪ್ರಿಲ್1 ರಿಂದ ಘಟಕವನ್ನು ನಿರ್ವಹಣೆಗಾಗಿ ಬಂದ್ ಮಾಡಲಾಗಿತ್ತು. 25 ವರ್ಷಗಳಲ್ಲಿ 1 ನೇ ಘಟಕವು 37619 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. 962 ದಿನಗಳ ಕಾಲ ನಿರಂತರ ವಿದ್ಯುತ್ ಉತ್ಪಾದನೆ ಮಾಡಿ ವಿಶ್ವ ದಾಖಲೆ ಮಾಡಿತ್ತು.

ನವೀಕರಣದ ಬಳಿಕ ಇನ್ನು ಸುಮಾರು 25 ವರ್ಷ ಯಾವುದೇ ಸಮಸ್ಯೆ ಇಲ್ಲದೇ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಎಂದು ಅಣು ವಿಜ್ಞಾನಿಗಳು ತಿಳಿಸಿದ್ದಾರೆ. ಘಟಕವು ವರ್ಷಕಕ್ಕೆ ರಾಜ್ಯದ ಗ್ರಿಡ್‌ಗೆ ಕನಿಷ್ಠ 1 ಸಾವಿ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿ ಕೊಡಲಿದೆ.

ಭಾರತೀಯ ತಂತ್ರಜ್ಞಾನ

25 ವರ್ಷಗಳ ಕಾರ್ಯ ನಿರ್ವಹಣೆಯ ಬಳಿಕ ರಿಯಾಕ್ಟರ್ ಒಳಗೆ ಭಾರಜಲ ಸಾಗಿಸುವ ಎನ್-ಮಾಸ್ ಕೂಲಂಟ್ ಚಾನಲ್(ಇಎಂಸಿಸಿಆರ್) ಹಾಗೂ ಎನ್-ಮಾಸ್ ಫೀಡರ್ (ಇಎಂಎಫ್‌ಆರ್)ಗಳು ದುರ್ಬಲವಾಗಿರುವ ಸಾಧ್ಯತೆ ಇರುವುದರಿಂದ ಅವುಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ನು 2025 ರ ಏಪ್ರಿಲ್‌ನಲ್ಲಿ ಪ್ರಾರಂಭಿಸಲಾಗಿತ್ತು. ನಿರ್ವಹಣೆ ಕಾರ್ಯವನ್ನು ಸ್ಥಳೀಯ ಕಂಪನಿಗಳ ಸಹಾಯದಿಂದ ಭಾರತೀಯ ತಂತ್ರಜ್ಞಾನದೊದಿಗೆ ನಡೆಸಲಾಗಿದೆ ಎಂದು ಎನ್‌ಪಿಸಿಐಎಲ್ ಪ್ರಕಟಣೆ ತಿಳಿಸಿದೆ.

ರಿಯಾಕ್ಟರ್‌ನ ಸಂಪೂರ್ಣ ಇಂಧನ ಮತ್ತು ಭಾರಜಲವನ್ನು ಖಾಲಿ ಮಾಡುವುದು, ನಂತರ ಕೂಲಂಟ್ ಚಾನೆಲ್‌ಗಳು ಮತ್ತು ಫೀಡರ್‌ಗಳನ್ನು ತೆಗೆಯುವುದು. ಹೊಸ ಕೂಲಂಟ್ ಚಾನೆಲ್‌ಗಳು ಮತ್ತು ಫೀಡರ್‌ಗಳನ್ನು ಅಳವಡಿಸುವುದು. ಹೊಸ ಯುರೇನಿಯಂ ಬಂಡಲ್‌ಗಳನ್ನು ತುಂಬುವುದು, ಭಾರಜಲ ತುಂಬುವ ಪ್ರಕ್ರಿಯೆಗಳನ್ನು ನಡೆಸಿ, ಹೈಡ್ರೋ ಪರೀಕ್ಷೆ ಮತ್ತು ಹಾಟ್ ಕಂಡಿಷನಿಂಗ್‌ಗಳನ್ನು ಕೈಗೊಳ್ಳಲಾಗಿದೆ.

ಈ ಎಲ್ಲ ಕಾರ್ಯಗಳನ್ನು ಸ್ವದೇಶಿ ರೊಬೊಟಿಕ್ ಮತ್ತು ದೂರ-ನಿರ್ವಹಣಾ ಉಪಕರಣಗಳ ಸಹಾಯದಿಂದ ನಡೆಸಲಾಗಿದೆ. ಇದು ಅತ್ಯಂತ ಸವಾಲಿನ ಹಾಗೂ ಸುರಕ್ಷಿತವಾಗಿ ನಡೆಯಬೇಕಾದ ಕಾರ್ಯವಾಗಿದೆ. ಎನ್‌ಪಿಸಿಐಎಲ್‌ನ ಅನುಭವಿ ಹಾಗೂ ತಂತ್ರಜ್ಞರು, ಇಂಜಿನಿಯರ್‌ಗಳು, ಗುತ್ತಿಗೆ ಸಿಬ್ಬಂದಿ ಹಾಗೂ ಗುತ್ತಿಗೆ ಪಡೆದ ಕಂಪನಿ ಯಶಸ್ವಿಯಾಗಿ ಮಾಡಿದೆ.

ಇದು ಅತ್ಯಂತ ಸೂಕ್ಷ್ಮವಾದ ಹಾಗೂ ಸವಾಲಿನ ಅಣು ರಿಯಾಕ್ಟರ್ ನಿರ್ವಹಣೆ ಹಾಗೂ ನವೀಕರಣ ಪ್ರಕ್ರಿಯೆಯಲ್ಲಿ ಭಾರತೀಯ ಸ್ವಾವಲಂಬನೆಯನ್ನು ಸಾಬೀತು ಮಾಡಿದ್ದು, ಅತಿ ಕಡಿಮೆ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿರುವುದು ಇನ್ನೊಂದು ಸಾಧನೆಯಾಗಿದೆ ಎಂದು ಎನ್‌ಪಿಸಿಐಎಲ್ ತಿಳಿಸಿದೆ.

..............