ಸಾಂದರ್ಭಿಕ ಚಿತ್ರ  
ಉತ್ತರ ಕನ್ನಡ

ಅಪ್ಪ ಬೈದನೆಂದು ಮನೆ ಬಿಟ್ಟ ಬಾಲಕ

ಬಾಗಲಕೋಟೆಯಿಂದ ಬಾಲಕನನ್ನು ಕರೆತಂದ ಕದ್ರಾ ಪೊಲೀಸರು

ಕಾರವಾರ: ಶಾಲೆ ಬಿಟ್ಟ ಬಗ್ಗೆ ತಂದೆ ಬೈದನೆಂದು ಮನೆ ಬಿಟ್ಟು ಹೋಗಿದ್ದ ಬಾಲಕನನ್ನು ಕದ್ರಾ ಪೊಲೀಸರು ಹುಡುಕಿ ಮನೆ ಸೇರಿಸಿದ್ದಾರೆ.
ಬಾಲಕ ಓದಿನಲ್ಲಿ ಚುರುಕಾಗಿರಲಿಲ್ಲ. 8 ನೇ ತರಗತಿಯಲ್ಲೇ ಶಾಲೆ ಬಿಟ್ಟಿದ್ದ. ಮನೆಯಲ್ಲಿ ಕುಳಿತು ರೀಲ್ ನೋಡಬೇಡ, ಶಾಲೆಗೆ ಹೋಗು ಎಂದು ಬೈದಿದ್ದಕ್ಕೆ ಅಕ್ಟೋಬರ್ 5 ರಂದು ಮನೆಯಿಂದ ನಾಪತ್ತೆಯಾಗಿದ್ದ. ಅ.28 ರಂದು ಆತನನ್ನು ಬಾಗಲಕೋಟೆಯಲ್ಲಿ ಪತ್ತೆ ಮಾಡಲಾಗಿದೆ.
ಬಾಲಕನ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಕದ್ರಾ ಪಿಎಸ್‌ಐ ಕೃಷ್ಣಕಾಂತ ಅಯ್ಯಪ್ಪ ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ  ಮಂಗಳೂರು, ಹುಬ್ಬಳ್ಳಿ, ಯಲ್ಲಾಪುರ, ಅಂಕೋಲಾ, ಗೋವಾ ಹೀಗೆ ವಿವಿಧೆಡೆ ಹೋಗಿ ಹುಡುಕಾಟ ನಡೆಸಿತ್ತು.

ದಂಡ ಕಟ್ಟಲು ಮುಂದಾದವರಿಗೆ 2 ಲಕ್ಷ ನಷ್ಟ

ಕಾರವಾರ: ಸಂಚಾರ ನಿಯಮ ಉಲ್ಲಂಘಿಸಿದ್ದೀರಿ ದಂಡ ಕಟ್ಟಿ ಎಂದು ಬಂದ ಮೊಬೈಲ್ ಸಂದೇಶ ನಂಬಿ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ವ್ಯಕ್ತಿ ಹಣ ಕಳೆದುಕೊಂಡ ಘಟನೆ ನಡೆದಿದೆ.
ಯಲ್ಲಾಪುರದಲ್ಲಿ ಹೆಸ್ಕಾಂನಲ್ಲಿ ಗುತ್ತಿಗೆ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಗೆ ಸಂದೇಶ ಬಂದಿತ್ತು. ಅದನ್ನು ನಂಬಿ ಎಂ ಪರಿವೇಶ ಎಂಬ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿ ಕೆಲವೇ ಹೊತ್ತಿನಲ್ಲಿ ಅವರ ಬ್ಯಾಂಕ್ ಖಾತೆಯಿಂದ 2.75 ಲಕ್ಷ ರೂ. ನಾಪತ್ತೆಯಾಗಿದೆ. ಕಾರವಾರ ಸೈಬರ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಕಾರು ಡಿಕ್ಕಿ

ಕಾರವಾರ: ಅಪರಿಚಿತ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಾಜಾಳಿ ಸರ್ಕಲ್ ಬಳಿ ನಡೆದಿದೆ. ಮುಡಗೇರಿಯ ಜಾನ್ ಮಸ್ಕರಿನೆಸ್ ಗಾಯಗೊಂಡವರು. ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.