ಕಾರವಾರ: ಕೈದಿಯ ಕೂಲಿ ಹಣ ನೀಡಲು 60 ಸಾವಿರ ರೂ. ಲಂಚ ಕೇಳಿದ್ದ ಜೈಲರ್‌ನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಹಳಿಯಾಳ ಉಪ ಬಂಧಿಖಾನೆ ಅಧಿಕಾರಿ ಕಲ್ಲೇಶ ಗಸ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವ ಲೋಕಾಯುಕ್ತ ಎಸ್‌ಪಿ ಕುಮಾರ ಚಂದ್ರ, ಡಿವೈಎಸ್‌ಪಿ ಧನ್ಯಾ ನಾಯಕ ಹಾಗೂ ಅಽಕಾರಿಗಳ ತಂಡ ಮಂಗಳವಾರ ಸ್ಥಳಕ್ಕೆ ತೆರಳಿದ್ದು, ಬುಧವಾರ ತನಿಖೆ ಆರಂಭಿಸಿದೆ.
ಹಿನ್ನೆಲೆ:
ಕೊಲೆ ಆರೋಪಿ ರಾಜಕುಮಾರ್ ಎಂಬಾತ ವಿಚಾರಣಾಧೀನ ಕೈದಿಯಾಗಿದ್ದಾಗ 2 ವರ್ಷ ಹಳಿಯಾಳ ಜೈಲಿನಲ್ಲಿದ್ದ. ಜೈಲಿನಲ್ಲಿ ಕೆಲಸ ಮಾಡಿದ್ದಕ್ಕಾಗಿ ದಿನಕ್ಕೆ 522 ರೂ.ಗಳಂತೆ ನೀಡುವ ವೇತನ 1,34,144 ರೂ.ಗಳು ಮಂಜೂರಾಗಿದ್ದು, ಅದನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು 60 ಸಾವಿರ ರೂ. ನೀಡುವಂತೆ ಗಸ್ತಿ ಪೀಡಿಸುತ್ತಿದ್ದ ಎನ್ನಲಾಗಿದೆ.
ಹಣ ನೀಡಲು ಮನಸ್ಸಿಲ್ಲದ ರಾಜಕುಮಾರ್ ಲೋಕಾಯುಕ್ತ ಮೊರೆ ಹೋಗಿದ್ದ. ಗಸ್ತಿ 10 ಸಾವಿರ ರೂ. ಹಣವನ್ನು ಧಾರವಾಡದ ಮಹಿಳೆಯೊಬ್ಬಳ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿದ್ದು, ಈ ಹಿಂದೆಯೂ 5 ಸಾವಿರ ರೂ.ಗಳನ್ನು ಜಮಾ ಮಾಡಿಸಿಕೊಂಡಿದ್ದ ಎನ್ನಲಾಗಿದೆ. ಮೊಬೈಲ್ ಸಂಭಾಷಣೆ ಸೇರಿ ವಿವಿಧ ದಾಖಲೆಳನ್ನು ಸಂಗ್ರಹಿಸಿರುವ ಲೋಕಾಯಕ್ತ ಅಽಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.