Swarnavalli ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ,ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ
- ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ
- ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಚಾತುರ್ಮಾಸ್ಯ
- ಕಾರವಾರ ಸೀಮೆಯ ಶಿಷ್ಯರಿಂದ ಸೇವೆ ಸ್ವೀಕಾರ
ಶಿರಸಿ: ನಗರ ಪ್ರದೇಶದಲ್ಲಿ ವಾಸಿಸುವವರು ತಮಗೆ ಧರ್ಮಾಚರಣೆಗೆ ಹೆಚ್ಚಿನ ಅವಕಾಶವಿಲ್ಲ ಎಂಬ ಭಾವನೆಯಿಂದ ಹೊರಬರಬೇಕು.
ನಿತ್ಯ ಜೀವನದಲ್ಲಿ ಆಸನ, ಪ್ರಾಣಾಯಾಮ, ಜಪ ಹಾಗೂ ಆಹಾರ ನಿಯಮಗಳನ್ನು ಅಳವಡಿಸಿಕೊಂಡರೆ ನಗರದಲ್ಲಿದ್ದರೂ ಧರ್ಮಾಚರಣೆ ಮಾಡುವುದರೊಂದಿಗೆ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು (Swarnavalli) ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಚಾತುರ್ಮಾಸ್ಯದ ಅಂಗವಾಗಿ ಶಿರಸಿ ನಗರ ಸೀಮೆ ಹಾಗೂ ಕಾರವಾರ ಸೀಮೆಯ ಶಿಷ್ಯ ಮಹಾಜನರು ಸೋಮವಾರ ಸಲ್ಲಿಸಿದ ಸೇವೆಯನ್ನು ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ನಗರೀಕರಣದ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸರಳವಾಗಿ ಅನುಸರಿಸಬಹುದಾದ ಧಾರ್ಮಿಕ ಸಾಧನೆಗಳ ಕುರಿತು ಮಾರ್ಗದರ್ಶನ ನೀಡಿದರು.
ಭಗವಂತನ ಚಿಂತನೆ ಹಾಗೂ ಮನಸಿನ ಏಕಾಗ್ರತೆಗೆ ಶರೀರದ ಸ್ಥಿರತೆ ಅತ್ಯಗತ್ಯ. ‘ಸ್ಥಿರ ಸುಖಂ ಆಸನಂ’ ಎಂಬಂತೆ ಶರೀರ, ಶಿರ ಮತ್ತು ಕುತ್ತಿಗೆಯನ್ನು ನೇರವಾಗಿರಿಸಿ ಕನಿಷ್ಠ ಒಂದೂವರೆ ಗಂಟೆಯಾದರೂ ಸ್ಥಿರವಾಗಿ ಕುಳಿತುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಶರೀರ ಸ್ಥಿರವಾದಾಗ ಮನಸನ್ನೂ ಏಕಾಗ್ರಗೊಳಿಸಲು ಸಾಧ್ಯವಾಗುತ್ತದೆ. ಪ್ರಾಣಾಯಾಮವು ದೇಹ ಹಾಗೂ ಮನಸನ್ನು ದೈವಿಕ ಚಿಂತನೆಗೆ ಸಿದ್ಧಗೊಳಿಸುವ ಸಾಧನೆಯಾಗಿದೆ.
ಉಸಿರನ್ನು ದೀರ್ಘವಾಗಿ ಹೊರಬಿಡುವುದು ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಕುಂಭಕ ಅಭ್ಯಾಸ ಮಾಡಬೇಕು. ಉಸಿರಾಟದ ಸಾಮರ್ಥ್ಯದ ಮಿತಿಯನ್ನು ಮೀರಿ ಒತ್ತಡ ಹೇರಬಾರದು.
ಪ್ರಾಣಾಯಾಮದಿಂದ ಸತ್ವಗುಣ ವೃದ್ಧಿಯಾಗಿ ಆಲಸ್ಯ ಹಾಗೂ ತಮೋಗುಣಗಳು ದೂರವಾಗುತ್ತವೆ ಎಂದರು.
ಆಸನ, ಪ್ರಾಣಾಯಾಮ ಮತ್ತು ಜಪದ ಸಾಧನೆಗೆ ಪೂರಕವಾಗಿ ಸಾತ್ವಿಕ ಆಹಾರ ಪದ್ಧತಿಯನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಧರ್ಮಾಚರಣೆ ಎಂಬುದು ನಿರ್ದಿಷ್ಟ ಸ್ಥಳ ಅಥವಾ ಪರಿಸರಕ್ಕೆ ಮಾತ್ರ ಸೀಮಿತವಲ್ಲ. ನಿತ್ಯ ಜೀವನದಲ್ಲಿಯೇ ಸರಳ ನಿಯಮಗಳನ್ನು ಪಾಲಿಸುವ ಮೂಲಕ ಧಾರ್ಮಿಕ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಶ್ರೀಗಳು ಅಭಯ ನೀಡಿದರು.
ಕಿರಿಯ ಶ್ರೀಗಳಾದ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಾರವಾರ ಹಾಗೂ ಶಿರಸಿ ನಗರ ಸೀಮೆಯ ಸಾವಿರಾರು ಶಿಷ್ಯ ಮಹಾಜನರು ಮತ್ತು ಭಕ್ತರು ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.
ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ನಗರದ ದಾಮೋದರ ಭಟ್, ಎಸ್.ಎಂ. ಉಪಾಧ್ಯ, ಚಂದ್ರಶೇಖರ ಹೆಗಡೆ, ಶ್ರೀಕಾಂತ ಹೆಗಡೆ ಇತರರಿದ್ದರು.