ಕಾರವಾರ: ದ್ವೀಪ (Island) ಅಭಿವೃದ್ಧಿ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಗೋವಾ ಸರ್ಕಾರ ಕೂಡ ಈಗ ದ್ವೀಪಗಳ ಸರ್ವೇ ಮಾಡಲು ಮುಂದಾಗಿದೆ. ಇದೇ ವಾರ ಗೋವಾ ಸರ್ಕಾರವು ಕರ್ನಾಟಕ ವ್ಯಾಪ್ತಿಯೂ ಸೇರಿದಂತೆ ಅರಬ್ಬಿ ಸಮುದ್ರದ ಎಲ್ಲ ದ್ವೀಪಗಳ ಸರ್ವೇ ಕಾರ್ಯ ನಡೆಸಲಿದೆ ಎಂಬ ಮಾಹಿತಿ ಲಭಿಸಿದೆ.
ಕೇಂದ್ರ ಗೃಹ ಸಚಿವಾಲಯದ ದಾಖಲೆಯಲ್ಲಿ ಕಾರವಾರ ಕಡಲ ತೀರದಿಂದ 12 ನಾಟಿಕಲ್ ಮೈಲ್ ವ್ಯಾಪ್ತಿಗೆ ಸೇರಿದ ಕೆಲವು ದ್ವೀಪಗಳಿಗೆ ಗೋವಾದ ಯುನೀಕ್ ಐಡಿ ನೀಡಲಾಗಿತ್ತು. ಅದನ್ನು ಗುರುತಿಸಿ, ಸರಿಪಡಿಸುವಂತೆ ಉತ್ತರ ಕನ್ನಡ ಜಿಲ್ಲಾಡಳಿತವು ವರ್ಷಗಳ ಹಿಂದೆಯೇ ಕೇಂದ್ರಕ್ಕೆ ಪತ್ರ ಬರೆದಿದೆ.
ಇನ್ನೊಂದು ಹೆಜ್ಜೆ ಮುಂದೆ ಹೋದ ಉತ್ತರ ಕನ್ನಡ ಜಿಲ್ಲಾಡಳಿತವು ಅರಬ್ಬಿ ಸಮುದ್ರದಲ್ಲಿ ತನ್ನ ವ್ಯಾಪ್ತಿಯಲ್ಲಿರುವ 24 ಸಣ್ಣಪುಟ್ಟ ದ್ವೀಪಗಳನ್ನು ಗುರುತಿಸಿ ಅದಕ್ಕೆ ಹೆಸರು ನೀಡಿದೆ. ಅಲ್ಲದೇ, ದ್ವೀಪ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಬಂದರು ಸಚಿವ ಮಂಕಾಳ ವೈದ್ಯ ಅವರ ವಿಶೇಷ ಆಸಕ್ತಿಯಂತೆ 16 ದ್ವೀಪಗಳ ಅಭಿವೃದ್ಧಿ ಸಂಬAಧ ಕರ್ನಾಟಕ ಮೆರಿಟೈಮ್ ಬೋರ್ಡ್ ಸುಮಾರು 1500 ಕೋಟಿ ರೂ.ಗಳ ಡಿಪಿಆರ್ ತಯಾರಿಸಿದೆ. ಈ ಪ್ರಕ್ರಿಯೆಯ ಮೊದಲ ಹೆಜ್ಜೆಯಾಗಿ, ಕಾರವಾರ ಹಾಗೂ ಭಟ್ಕಳ ಸಮೀಪದ 7 ದ್ವೀಗಳಿಗೆ ಸರ್ವೇ ನಂಬರ್ ನೀಡಿ ಅಽಸೂಚನೆ ಹೊರಡಿಸಿದೆ. ಆದರೆ, ಈ ಬೆಳವಣಿಗೆ ಗೋವಾ ರಾಜ್ಯವನ್ನು ಕೆರಳಿಸಿದೆ.
ಕಾರವಾರದ ಸಮೀಪವಿರುವುದು ಸೇರಿ ಹಲವು ದ್ವೀಪಗಳು ಹಿಂದೆ ಗೋವಾದ ಪೋರ್ಚುಗೀಸರ ಕೈವಶದಲ್ಲಿತ್ತು. ಇದರಿಂದ ಆ ಎಲ್ಲ ದ್ವೀಪಗಳೂ ಈಗಲೂ ಗೋವಾಕ್ಕೇ ಸೇರಬೇಕು ಎಂದು ಅಲ್ಲಿನ ಅಽಕಾರಿಗಳು, ರಾಜತಾಂತ್ರಿಕ ಪ್ರಮುಖರು ವಾದಿಸುತ್ತಿದ್ದಾರೆ. ದ್ವೀಪ ವಿವಾದದ ಬಗ್ಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸಹ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಅಲ್ಲದೇ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದಾರೆ ಎಂದು ಗೋವಾ ಸರ್ಕಾರದ ಹಿರಿಯ ಅಽಕಾರಿಯೊಬ್ಬರು `ವಿಜಯವಾಣಿ'ಗೆ ಮಾಹಿತಿ ನೀಡಿದ್ದಾರೆ.
ಕರ್ನಾಕ ಗೋವಾದ ವ್ಯಾಪ್ತಿಯ ದ್ವೀಪಗಳನ್ನು ಅಭಿವೃದ್ಧಿ ಮಾಡುತ್ತಿದೆ ಎಂಬ ಸುದ್ದಿ ಬಿದ್ದಿದೆ. ಈ ಸಂಬAಧ ಪರಿಶೀಲನೆ ನಡೆಸಲು ಬಂದರು ಹಾಗೂ ಕಂದಾಯ ಸಚಿವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಪರಿಶೀಲನೆ ನಡೆಸಿದ ಬಳಿಕ ನಾವು ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯಕ್ಕೆ ಪತ್ರ ಬರೆಯಲಿದ್ದೇವೆ. ಗೋವಾ ವ್ಯಾಪ್ತಿಗೆ ಸೇರಿದ ಯಾವುದೇ ದ್ವೀಪಗಳನ್ನು ಕರ್ನಾಟಕ ಅಭಿವೃದ್ಧಿ ಮಾಡಲು ಅವಕಾಶ ನೀಡುವುದಿಲ್ಲ. ಬದಲಾಗಿ, ನಾವು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡಲಿದ್ದೇವೆ. ಕೆಲವು ದ್ವೀಪಗಳಿಗೆ ಸಂಬಂಧಿಸಿದಂತೆ ಭಾರತೀಯ ನೌಕಾಸೇನೆ ಮತ್ತು ನಮ್ಮ ನಡುವೆ ವಿವಾದವಿದೆ. ಅದನ್ನೂ ಮುಂದಿನ ದಿನಗಳಲ್ಲಿ ಬಗೆಹರಿಸಿ, ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ.
"
ಮಾಜಾಳಿಯ ಒಂದು ದ್ವೀಪ ಬಿಟ್ಟು ಬೇರ್ಯಾವುದೇ ದ್ವೀಪಗಳ ಬಗ್ಗೆ ವಿವಾದವಿಲ್ಲ. ಉತ್ತರ ಕನ್ನಡ ತೀರದ 12 ನಾಟಿಕಲ್ ಮೈಲ್ ವ್ಯಾಪ್ತಿಯ ದ್ವೀಪಗಳ ಸರ್ವೇ ಮಾಡಲು ಇಲ್ಲಿನ ಆಡಳಿತದ ಅನುಮತಿ ಬೇಕಾಗಿದೆ.
ಕೆ.ಲಕ್ಷ್ಮೀಪ್ರಿಯಾ ಜಿಲ್ಲಾಧಿಕಾರಿ, ಉತ್ತರ ಕನ್ನಡ