Housing project ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಶಾಸಕ ಭೀಮಣ್ಣ ನಾಯ್ಕ ಬೆಂಗಳೂರಿನಲ್ಲಿ ಭೇಟಿಯಾಗಿ ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ ಹೆಚ್ಚಿನ ಮನೆಗಳನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.  
ಉತ್ತರ ಕನ್ನಡ

Housing project ಹೊಸ ವಸತಿ ಯೋಜನೆ ಅನುಷ್ಠಾನಗೊಳಿಸಿ

ಮಂಜುನಾಥ ಕೆಂಪಸಣ್ಣವರ
ಶಿರಸಿ: ಶಿರಸಿ- ಸಿದ್ದಾಪುರ ಕ್ಷೇತ್ರದ ಸಾರ್ವಜನಿಕರ ಮತ್ತು ವಸತಿ ರಹಿತರ ಹಿತದೃಷ್ಟಿಯಿಂದ ಶಾಸಕ ಭೀಮಣ್ಣ ಟಿ. ನಾಯ್ಕ ಅವರು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಬೆಂಗಳೂರಿನಲ್ಲಿ ಗುರುವಾರ ಭೇಟಿಯಾಗಿ ಚರ್ಚೆ ನಡೆಸಿದರು.
ಕ್ಷೇತ್ರದ ಬಡ ಹಾಗೂ ವಸತಿ ರಹಿತ ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ವಸತಿ ಯೋಜನೆಗಳಡಿ Housing project ಹೆಚ್ಚಿನ ಸಂಖ್ಯೆಯ ಮನೆಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಕ್ಷೇತ್ರದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತೀವ್ರವಾಗಿ ಮನೆಗಳ ಅಗತ್ಯವಿರುವ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪ್ರಸ್ತಾಪಿಸಿ, ಹೊಸ ವಸತಿ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಕೋರಿದರು.
ನನೆಗುದಿಗೆ ಬಿದ್ದ ಯೋಜನೆಗಳ ಚುರುಕುಗೊಳಿಸಬೇಕು, ಪ್ರಸ್ತುತ ಪ್ರಗತಿಯಲ್ಲಿರುವ ವಸತಿ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನ ಶೀಘ್ರ ಬಿಡುಗಡೆ ಮಾಡುವಂತೆ ಸಚಿವರಲ್ಲಿ ಆಗ್ರಹಿಸಿದರು.
ಶಾಸಕರ ಮನವಿಯನ್ನು ಆಲಿಸಿದ ವಸತಿ ಸಚಿವ ಜಮೀರ್ ಅವರು, ಕ್ಷೇತ್ರದ ವಸತಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಾಗಿ ಭರವಸೆ ನೀಡಿದರು. ನಿಯಮಾನುಸಾರ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ತಲುಪಿಸಲು ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವುದಾಗಿ ಹೇಳಿದರು.