ಯಲ್ಲಾಪುರದ ತಹಸೀಲ್ದಾರ್ ಕಚೇರಿಯಲ್ಲಿ ಮೀನು ವ್ಯಾಪಾರಿಗಳ ಸಭೆಯಲ್ಲಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧಿಕಾರಿ ಹೇಮಾವತಿ ಭಟ್ಟ, ಆರೋಗ್ಯ ನಿರೀಕ್ಷಕ ಗುರು ಗಡಗಿ, ಕಂದಾಯ ನಿರೀಕ್ಷಕ ಕಿರಣ ಕಮ್ಮಾರ, ಎಎಸ್‌ಐ ರೇಣುಕಾ ಇತರರಿದ್ದರು.
- ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಎಚ್ಚರಿಕೆ
- ಯಲ್ಲಾಪುರದಲ್ಲಿ ಮೀನು ವ್ಯಾಪಾರಿಗಳ ಸಭೆ
ಯಲ್ಲಾಪುರ: ಮೀನು ಮಾರುಕಟ್ಟೆಯ ಹೊರತಾಗಿ ಎಲ್ಲೆಂದರಲ್ಲಿ ಮೀನು-ಮಾಂಸಗಳನ್ನು ಬೇಕಾಬಿಟ್ಟಿ ವ್ಯಾಪಾರ ಮುಂದುವರಿದರೆ ಅಂಥವರ ಮೇಲೆ ಎಫ್‌ಐಆರ್ ದಾಖಲು ಮಾಡಲಾಗುವುದು ಎಂದು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮೀನು ಮಾರಾಟದ ಕುರಿತು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಬುಧವಾರ ತಹಸೀಲ್ದಾರ್ ಕಚೇರಿಯಲ್ಲಿ ವ್ಯಾಪಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವ್ಯಾಪಾರಿಗಳಿಗೆ ಮೀನು ಮಾರುಕಟ್ಟೆಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಅನಧಿಕೃತ ವ್ಯವಹಾರಕ್ಕೆ ಅವಕಾಶವಿಲ್ಲ. ಹೊರಗಿನಿಂದ ಮೀನು ತಂದ ಆಟೋ ಮೀನು ಮಾರುಕಟ್ಟೆ ಹೊರತುಪಡಿಸಿ ಬೇರೆಡೆ ಹೋಗುವಂತಿಲ್ಲ ಎಂದರು.
ಪಪಂ ಮುಖ್ಯಾಧಿಕಾರಿ ಕೇಶವ ಚೌಗುಲೆ ಮಾತನಾಡಿ, ಮೀನು ಮಾರುಕಟ್ಟೆಯಲ್ಲಿ ಮಾತ್ರ ಮೀನು ಮಾರಾಟ ಮಾಡಬೇಕು. ಇಲ್ಲವಾದಲ್ಲಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಸಿದರು.
ಇದಕ್ಕೆ ಯಲ್ಲಾಪುರದ ಮೀನು ಮಾರಾಟಗಾರರು ಒಪ್ಪಿಗೆ ಸೂಚಿಸಿದರು. ಆದರೆ, ಅಂಕೋಲಾದಿಂದ ಬರುತ್ತಿರುವ ಮೀನು ಮಾರಾಟಗಾರರು ನಮಗೆ ಮೀನು ಮಾರುಕಟ್ಟೆಯಲ್ಲಿ ಮಾರಾಟ ಸಾಧ್ಯವಿಲ್ಲ. ಮೀನು ಮಾರುಕಟ್ಟೆಯ ಹೊರತುಪಡಿಸಿ ಬೇರೆ ಕಡೆ ವ್ಯವಸ್ಥೆ ಮಾಡಿ ಎಂದಾಗ ಮಾರಾಟ ಮಾಡುವಂತಿದ್ದರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಇಲ್ಲವಾದಲ್ಲಿ ಇಲ್ಲಿಗೇ ಬರದೇ ಅಂಕೋಲಾದಲ್ಲೇ ಮಾರಾಟ ಮಾಡಿ ಎಂದು ಅಧಿಕಾರಿಗಳು ಮತ್ತು ಸ್ಥಳೀಯ ವ್ಯಾಪಾರಸ್ಥರು ತಿಳಿಸಿದರು.
ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಒಪ್ಪಿದ ಸ್ಥಳೀಯ ವ್ಯಾಪಾರಸ್ಥರು ಹೊರಗಿನಿಂದ ಬಂದ ವ್ಯಾಪಾರಸ್ತರು ಹೊರಗೆ ಮಾರುಕಟ್ಟೆ ಹಚ್ಚಿದ ಕಾರಣ ಮೀನು ಮಾರುಕಟ್ಟೆಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಅಂಕೋಲಾದವರು ಬರುವ ಮೊದಲು ಎಲ್ಲಿಯೂ ಹೊರಗೆ ಮಾರುತ್ತಿರಲಿಲ್ಲ. ಕಿರವತ್ತಿ ಬರುವ ಎರಡು ಗಾಡಿ ಹುಬ್ಬಳ್ಳಿಯಿಂದ ಮೀನು ತಂದು ಹೊರಗಡೆ ಮಾರುವವರಿಗೆ ನೀಡುತ್ತಾರೆ. ಹೊರಗಿನವರು ಇವರಿಂದ ಖರೀದಿಸಿ ಮಾರಾಟ ಮಾಡುತ್ತಾರೆ. ಗ್ರಾಹಕರು ಅಂಕೋಲಾದ ತಾಜಾ ಮೀನು ಎಂದು ತಪ್ಪು ಗ್ರಹಿಕೆ ಹೊಂದಿರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಅಧಿಕಾರಿ ಹೇಮಾವತಿ ಭಟ್ಟ, ಆರೋಗ್ಯ ನಿರೀಕ್ಷಕ ಗುರು ಗಡಗಿ, ಕಂದಾಯ ನಿರೀಕ್ಷಕ ಕಿರಣ ಕಮ್ಮಾರ, ಎಎಸ್‌ಐ ರೇಣುಕಾ ಹಾಗೂ ಮಾರುಕಟ್ಟೆ ಹೊರಗಿನ ಮೀನು ವ್ಯಾಪಾರಸ್ಥರು ಉಪಸ್ಥಿತರಿದ್ದರು.