ಕಾರವಾರದಿಂದ ಮಡಗಾಂವ ವರೆಗೆ ವಿ. ಸೋಮಣ್ಣ ರೈಲಿನಲ್ಲಿ ತೆರಳಿ ಪರಿಶೀಲಿಸಿದರು.  
ಉತ್ತರ ಕನ್ನಡ

ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸಚಿವ ವಿ.ಸೋಮಣ್ಣ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಏಪ್ರಿಲ್ 25 ರ ಒಳಗಡೆ ರೈಲ್ವೆ ಮಂಡಳಿಯಿAದ ಅಂತಿಮ ಅನುಮೋದನೆ ಸಿಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಕಾರವಾರ-ಮಡಗಾಂವ ವ್ಯಾಪ್ತಿಯ ಕೊಂಕಣ ರೈಲ್ವೆ ಮಾರ್ಗದಲ್ಲಿ ವಿಶೇಷ ರೈಲಿನಲ್ಲಿ ಶನಿವಾರ ಪರಿವೀಕ್ಷಣೆ(ವಿಂಡೋ ಟ್ರಯಲಿಂಗ್)ಗೆ ತೆರಳುವ ಮೊದಲು ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದರು.
ವಾಜಪೇಯಿ ಅವರ ಕಾಲದಲ್ಲಿ 1998-99 ನೇ ಸಾಲಿನಲ್ಲಿ ಪ್ರಾರಂಭವಾದ 164 ಕಿಮೀಗಳ ಯೋಜನೆ ಇದಾಗಿದೆ. ಕಲಘಟಗಿಯವರೆಗೆ ರೈಲ್ವೆ ಮಾರ್ಗವೂ ಆಗಿದೆ. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ ವಾಪಸ್ ಯೋಜನೆ ಮಾಡಬೇಕು ಎಂದು ಚಾಲನೆ ನೀಡಿದ್ದೇವೆ. ಈಗ ಮೋದಿ ಅವರ ಕಾಲದಲ್ಲಿ ಯೋಜನೆಯನ್ನು ಪೂರ್ಣ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಪರಿಸರವಾದಿಗಳ ವಿರೋಧದಿಂದ ಯೋಜನೆ ವಿಳಂಬವಾಗಿದೆ. ಆದರೆ, ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ. ಯೋಜನೆಯಿಂದ ದೊಡ್ಡ ಮಟ್ಟದ ಪ್ರಯೋಜನವಾಗಲಿದೆ. ಹಾಗಾಗಿ ಅದಕ್ಕೆ ವಿರೋಧ ವ್ಯಕ್ತಪಡಿಸಬಾರದು ಎಂದು ಪರಿಸರವಾದಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ನ್ಯಾಯಾಲಯದ ವ್ಯಾಜ್ಯಗಳು ಮುಗಿದಿವೆ. ಈಗಾಗಲೇ ರೈಲ್ವೆ ಇಲಾಖೆಯು 16,500 ಕೋಟಿ ರೂ. ಡಿಪಿಆರ್ ಸಿದ್ಧ ಮಾಡಿಕೊಟ್ಟಿದೆ. ಪರಿಸರ ಪರವಾನಗಿಯೂ ಯೋಜನೆಗೆ ಲಭಿಸಿದೆ.2,350 ಎಕರೆ ಭೂಮಿ ಬೇಕಿದ್ದು, ಅದರ ಸ್ವಾಧೀನಕ್ಕೂ ಕ್ರಮವಾಗಿದೆ. ವನ್ಯಜೀವಿ ಮಂಡಳಿಯ ಅನುಮತಿಗಾಗಿ ಕಾಯುತ್ತಿದ್ದೇವೆ. ನಾಲ್ಕೈದು ತಿಂಗಳಲ್ಲಿ ಯೋಜನೆಗೆಗೆ ಪೂರ್ಣ ಅನುಮೋದನೆ ದೊರೆಯಲಿದೆ ಎಂದರು.