ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರವಾರ: ಆತ್ಮ ಸ್ಥೈರ್ಯ ಮತ್ತು ಸತತ ಪ್ರಯತ್ನದಿಂದ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾಶಿಕ್ಷಣ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವ ಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇಂತಹ ಅನೇಕ ಅಡೆತಡೆಗಳ ನಡುವೆಯೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಪಾಲಕರು, ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಅಗತ್ಯವಿದ್ದು, ಇಂತಹ ಮಾರ್ಗದರ್ಶನ ದೊರೆತ ಕಾರಣ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ.ಭವಿಷ್ಯದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಹಾಗೂ ಪೋಷಕರಿಗೆ ಹೆಮ್ಮೆ ತರಬೇಕು ಎಂದರು.
ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹೊನ್ನಾವರದ ಎಸ್‌ಡಿಎಂ ಪಿಯು ಕಾಲೇಜ್‌ನ ಚಿನ್ಮಯಿ ಮಂಜುನಾಥ್ ಶೆಟ್ಟಿ, ಶಿರಸಿಯ ಎಂಇಎಸ್ ಪಿಯು ಕಾಲೇಜಿನ ಪ್ರಣವ್ ಎನ್. ಭಟ್, ಭಟ್ಕಳ ದಿ.ನ್ಯೂ ಇಂಗ್ಲೀಷ್ ಪಿಯು ಕಾಲೇಜ್‌ನ ಸಂಜನಾ ನಾಗಪ್ಪ ನಾಯ್ಕ, ಹಾಗೂ ಭಟ್ಕಳ ಅಂಜುಮನ್ ಪಿಯು ಮಹಿಳಾ ಕಾಲೇಜ್‌ನ ಅಕ್ಷಾಶ್ರೀನ್, ಶಿರಸಿ ಎಂಇಎಸ್ ಪಿಯು ಕಾಲೇಜಿನ ಅರ್ಪಿತಾ ಎಸ್.ಹೆಗಡೆ, ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ ಶಿರಸಿ ಎಂಇಎಸ್ ಪಿಯು ಕಾಲೇಜ್‌ನ ಚೈತನ್ಯ ಜಿ. ಹೆಗಡೆ ಮತ್ತು ಭೂಮಿಕಾ ಡಿ. ನಾಯಕ ,ಭಟ್ಕಳದ ಅಂಜುಮನ್ ಪಿಯು ಮಹಿಳಾ ಕಾಲೇಜ್‌ನ ಮೈಮುನಾ ಅಜೈಬ್, ನ್ಯೂ ಇಂಗ್ಲಿಷ್ ಪಿಯು ಕಾಲೇಜ್‌ನ ತೇಜಸ್ ರವಿ ನಾಯಕ್, ಸಿದ್ದಾಪುರದ ಚೇತನಾ ಪಿಯು ಕಾಲೇಜ್‌ನ ರಘು ಶರಚಂದ್ರ ಹೆಗಡೆ, ಕಲಾ ವಿಭಾಗದಲ್ಲಿ ಸಾಧನೆ ಮಾಡಿದ ಭಟ್ಕಳದ ಅಂಜುಮನ್ ಪಿಯು ಮಹಿಳಾ ಕಾಲೇಜ್‌ನ ಶಿಫಾ ಅನಮ್, ದಾಂಡೇಲಿಯ ತೌಹೀದ್ ಪಿಯು ಕಾಲೇಜ್‌ನ ಲಯಬಾ ಪರ್ವೀನ್ ಮೊಹಮ್ಮದ್ ಇಬ್ರಾಹಿಂ , ಕುಮಟಾ ಹಿರೇಗುತ್ತಿ ಸರ್ಕಾರಿ ಪಿಯು ಕಾಲೇಜು ಜಾಹ್ನವಿ ಮಾಸ್ತಿ ಗೌಡ, ಕಾರವಾರದ ಸರ್ಕಾರಿ ಪಿಯು ಕಾಲೇಜಿನ ಶಾಕ್ಷಿ ವಿನೋದ್ ನಾಯ್ಕ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸತೀಶ್ ನಾಯ್ಕ, ಪ್ರಾಚಾರ್ಯ ಸಂಘದ ಪ್ರಧಾನ ಕಾರ್ಯದರ್ಶಿ ಅಮೃತ್ ರಾಮನಾಥನ್, ಉಪನ್ಯಾಸಕ ಸಂಘದ ಅಧ್ಯಕ್ಷ ಪ್ರವೀಣ್ ನಾಯಕ ಹಾಗೂ ವಿದ್ಯಾರ್ಥಿಗಳು, ಪೋಷಕರು ಮತ್ತಿತರರು ಇದ್ದರು.