ಮೃತ ಸಹೋದರರು  
ಉತ್ತರ ಕನ್ನಡ

ಹೊನ್ನಾವರ ಸುಳಿಮುರ್ಕಿ ಕಾರು ಭಸ್ಮ ಪ್ರಕರಣ - ಅಪಘಾತವಲ್ಲ ಕೊಲೆ

ಕಾರವಾರ: ಹೊನ್ನಾವರ ಸುಳಿಮುರ್ಕಿಯಲ್ಲಿ ಸಹೋದರರಿಬ್ಬರು ಕಾರಿನಲ್ಲಿ ಆಕಸ್ಮಿಕವಾಗಿ ಭಸ್ಮವಾಗಿದ್ದಲ್ಲ ಅದು ಕೊಲೆ ಎಂದು ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜ.7 ರಂದು ಅದೊಂದು ಅಪಘಾತ ಎಂದು ಎಫ್‌ಐಆರ್ ದಾಖಲಾಗಿತ್ತು. ಆದರೆ, ಮೃತರ ಸಹೋದರ ಉಮೇಶ ವೀರಭದ್ರ ಹಸ್ಲರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್‌ಗೆ ಹೆಚ್ಚುವರಿ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಿದ್ದಾರೆ. ಕೊಲೆ, ಸಾಕ್ಷ÷್ಯ ನಾಶ ಹಾಗೂ ಎಸ್‌ಸಿ, ಎಸ್‌ಟಿ ಪ್ರಿವೆನ್ಶನ್ ಆಫ್ ಅಟ್ರಾಸಿಟಿ ಕಾಯ್ದೆಯನ್ನು ಸೇರಿಸಿದ್ದಾರೆ.
ಸಿದ್ದಾಪುರದ ಕುಡಗುಂದದ ಪ್ರಮೋದ ಗಣಪತಿ ನಾಯ್ಕ ಹಾಗೂ ಇತರರು ಸೇರಿಕೊಂಡು ಕಾರಿಗೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿ ತಮ್ಮ ಸಹೋದರರಿಬ್ಬರನ್ನು ಕೊಲೆ ಮಾಡಿದ್ದಾರೆ ಎಂದು ಮೃತರ ಸಹೋದರ ಉಮೇಶ ವೀರಭದ್ರ ಹಸ್ಲರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ಇಡೀ ಪ್ರಕರಣ ತಿರುವುವು ಪಡೆದುಕೊಂಡಿದೆ.

ಹಿನ್ನೆಲೆ:

ಜ.6 ರ ಮಧ್ಯರಾತ್ರಿ ಹೊನ್ನಾವರ-ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳಿಮುರ್ಕಿ ಕ್ರಾಸ್‌ನಲ್ಲಿ ಕಾರೊಂದು ಸುಟ್ಟು ಭಸ್ಮವಾಗಿತ್ತು. ಅದರಲ್ಲಿ ಸಿದ್ದಾಪುರ ಕುಡಗುಂದದ ಚಂದ್ರಶೇಖರ ವೀರಭದ್ರ ಹಸ್ಲರ್ ಹಾಗೂ ಮಂಜುನಾಥ ವೀರಭದ್ರ ಹಸ್ಲರ್ ಎಂಬ ಇಬ್ಬರು ಸುಟ್ಟು ಭಸ್ಮವಾಗಿದ್ದರು.
ಆದರೆ, ಅವರ ಸಾವಿನ ಹಿಂದೆ ಹಲವು ಅನುಮಾನ ಕಾಡುತ್ತಿತ್ತು. ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿರುವ ಕುರಿತು ಮೃತರ ಸಹೋದರ ದೂರು ನೀಡಿದ್ದ. ಜಿಲ್ಲಾ ಹಸ್ಲರ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಲ್ಲದರ ಪರಿಣಾಮ ಪೊಲೀಸರು ತನಿಖೆ ನಡೆಸಿ ಕ್ರಮ ವಹಿಸಿದ್ದಾರೆ.