ಸಿದ್ದಾಪುರ ತಾಲೂಕಿನ ಬಾಳೇಸರ ಮಲ್ಲಿಕಾರ್ಜುನ ವ್ಯವಸಾಯ ಸೇವಾ ಸಹಕಾರ ಸಂಘದ ಶತಮಾನೋತ್ಸವ ಹಾಗೂ ಕಟ್ಟಡಗಳ ಉದ್ಘಾಟನೆ ನಡೆಯಿತು. ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ಚಂದ್ರಶೇಖರ ಹೆಗಡೆ, ಆರ್.ಎಂ. ಹೆಗಡೆ, ಗಣಪತಿ ಹೆಗಡೆ, ರವಿ ಹೆಗಡೆ ಇತರರಿದ್ದರು.
ಸಿದ್ದಾಪುರ: ಜನರ ಬದುಕಿಗೆ ಶಕ್ತಿ ನೀಡುವ ಸಹಕಾರಿ ಸಂಘಗಳು ಆರ್ಥಿಕ ಶಕ್ತಿ ಬೆಳೆಸಿಕೊಳ್ಳಬೇಕಾದರೆ ಸಹಕಾರಿ ಸಂಘದಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ತಾಲೂಕಿನ ಬಾಳೇಸರದಲ್ಲಿ ಶನಿವಾರ ಆಯೋಜಿಸಿದ್ದ ಮಲ್ಲಿಕಾರ್ಜುನ ವ್ಯವಸಾಯ ಸೇವಾ ಸಹಕಾರ ಸಂದ ಶತಮಾನೋತ್ಸವ ಸಮಾರಂಭ ಹಾಗೂ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯ ಅನೇಕ ಹಿರಿಯರು ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಬೆಳೆಯಲು ಕಾರಣೀಕರ್ತರಾಗಿದ್ದಾರೆ. ಆದರೆ, ಇತ್ತೀಚಿನ ದಿನದಲ್ಲಿ ಸಹಕಾರಿ ಸಂಸ್ಥೆಗಳು ದಾರಿ ತಪ್ಪುತ್ತಿದೆ. ಆರ್ಥಿಕ ವ್ಯವಹಾರಗಳು ಸರಿಯಾಗಿ ನಡೆಯುತ್ತಿಲ್ಲ, ಲೋಪವಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹಾಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಅಡಕೆ ಎಲೆ ಚುಕ್ಕಿ ರೋಗದಿಂದ ಈ ವರ್ಷ ಶೇ. 25ರಿಂದ 30ರಷ್ಟು ಮಾತ್ರ ಬೆಳೆ. ಇದರಿಂದ ಬೆಳೆ ಸಾಲ ಹಾಗೂ ಮಾಧ್ಯಮಿಕ ಸಾಲ ತುಂಬಲು ಸದಸ್ಯರಿಗೆ ಕಂತುಗಳನ್ನು ಮಾಡಿಕೊಡಬೇಕು. ಇದಕ್ಕೆ ಕೆಡಿಸಿಸಿ ಬ್ಯಾಂಕ್ ಮುಂದೆ ಬರಬೇಕು. ಶಾಸಕರು ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಇದಕ್ಕೆ ಸಹಕರಿಸಬೇಕು ಎಂದರು.
ಶಾಸಕ ಶಿವರಾಮ ಹೆಬ್ಬಾರ ಬೆಳ್ಳಿ ನಾಣ್ಯ ಬಿಡುಗಡೆಗೊಳಿಸಿ ಮಾತನಾಡಿ, ರೈತರು ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಸಂಕಷ್ಟಕ್ಕೆ ಯಾವತ್ತೂ ಸ್ಪಂದನೆ ಇದೆ. ಪ್ರತಿಯೊಬ್ಬ ಸದಸ್ಯರು ಸಹಕಾರಿ ಸಂಘದಲ್ಲಿ ವ್ಯವಹರಿಸುವ ಮೂಲಕ ಆರ್ಥಿಕವಾಗಿ ಸುಧಾರಣೆಗೊಳ್ಳುವುದರೊಂದಿಗೆ ಸಂಘವನ್ನು ಸದೃಢವಾಗಿಸಲು ಸಾಧ್ಯ ಎಂದರು.
ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಶಿರಸಿ ಡೆವಲಪ್‌ಮೆಂಟ್ ಅಧ್ಯಕ್ಷ ಭಾಸ್ಕರ ಹೆಗಡೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ ಹೆಗಡೆ ಹುಳಗೋಳ, ಮನುವಿಕಾಸ ಸಂಸ್ಥೆ ಮುಖ್ಯಸ್ಥ ಗಣಪತಿ ಭಟ್ಟ ಕರ್ಜಗಿ, ಪತ್ರಕರ್ತ ಪ್ರವೀಣ ಹೆಗಡೆ, ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಜಿ.ಕೆ.ರಾಮಪ್ಪ, ನಿರ್ದೇಶಕ ಎಸ್.ಎನ್. ಹೆಗಡೆ ಇತರರಿದ್ದರು.
ಸಂಘದಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕರು ಹಾಗೂ ಸ್ಥಳ ದಾನಿಗಳನ್ನು ಸನ್ಮಾನಿಸಲಾಯಿತು.
ಅಘನಾಶಿನಿ, ಬೇಡ್ತಿ, ವರದಾ ನದಿ ಜೋಡಣೆ ವಿರೋಧಿ ಹೋರಾಟಕ್ಕೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನೇತೃತ್ವ ವಹಿಸಿದ್ದು ಒಳ್ಳೆಯದೇ ಆಗಿದೆ. ಇಲ್ಲದಿದ್ದರೆ ರಾಜ್ಯ ಸರ್ಕಾರ ಸ್ಥಗಿತಗೊಳಿಸಲಿ, ಕೇಂದ್ರ ಸರ್ಕಾರ ಸ್ಥಗಿತಗೊಳಿಸಲಿ ಎನ್ನುವ ಕಚ್ಚಾಟ ನಡೆಯುತ್ತಿತ್ತು. ನಮಗೆ ರಾಜಕಾರಣ ಮುಖ್ಯವಲ್ಲ. ಜನರ ಜೀವನ ಮುಖ್ಯ. ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯುತ್ತೇವೆ.