ಗಣೇಶ ಭಟ್ಟ ಮತ್ತು ಶಿವಾನಂದ ಹೆಗಡೆ
ಹೊನ್ನಾವರ: ಅಮೆರಿಕ ಫ್ಲೋರಿಡಾದ ವಿದ್ಯಾ ವೇದ ವಿಜ್ಞಾನ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ವಿದ್ಯಾ ವಿಶ್ವ ಸಂಶೋಧನಾ ಪ್ರತಿಷ್ಠಾನಂ ಭಾರತೀಯ ಪರಂಪರೆಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೊಡುವ ಗೌರವ ಡಾಕ್ಟರೇಟ್ ಈ ಬಾರಿ ಉತ್ತರಕನ್ನಡದ ಇಬ್ಬರಿಗೆ ದೊರೆತಿದೆ.
ಅಯೋಧ್ಯೆಗಾಗಿ ಇನ್ನೊಂದು ಬಾಲರಾಮನನ್ನು ಮತ್ತು ಕಾಶಿ ಅನ್ನಪೂರ್ಣೇಶ್ವರಿ ದೇವಿಯ ಶಿಲಾಮೂರ್ತಿ ನಿರ್ಮಿಸಿ ಪ್ರಸಿದ್ಧರಾಗಿರುವ ಇಡಗುಂಜಿಯ ಗಣೇಶ ಭಟ್ ಮತ್ತು ಉತ್ತರಕನ್ನಡ ಜಿಲ್ಲೆಯ ಯಕ್ಷಗಾನ ಪರಂಪರೆಯನ್ನು ಮೂರು ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವ, ಇತ್ತೀಚೆ ಯುನೆಸ್ಕೋ ಮಾನ್ಯತೆ ಪಡೆದ ಕೆರೆಮನೆ ಕುಟುಂಬದ ಶಿವಾನಂದ ಹೆಗಡೆ ಇವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಏ. 11 ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಸ್ವಾಮಿ ಶ್ರೀ ನಿರ್ಭಯಾನಂದ ಸರಸ್ವತಿ, ಡಾ. ಬಿ.ಎಸ್.ಶ್ರೀನಾಥ, ಅಶೋಕ ರಾಮಕೃಷ್ಣನ್, ಜೆ. ಶ್ರೀನಿವಾಸಮೂರ್ತಿ ಮೊದಲಾದವರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಪ್ರದಾನವಾಗಲಿದೆ.
ಗಣೇಶ ಭಟ್ಟರು:
ವೈದಿಕ ಕುಟುಂಬದಲ್ಲಿ ಜನಿಸಿ ಶಿಲ್ಪಕಲೆಯನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿ ಜೊತೆಯಲ್ಲಿ ದೇಶ ವಿದೇಶದಲ್ಲಿ ಪ್ರತಿಷ್ಠಾಪನೆಯಾಗಲು ನೂರಾರು ಶಿಲಾಮೂರ್ತಿಯನ್ನು ರಚಿಸಿಕೊಟ್ಟವರು ಇಡಗುಂಜಿ ಗಣೇಶ ಭಟ್ ಅವರು. ಶಿಲ್ಪಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿ ತಮ್ಮ ಕೃತಿಗಳಲ್ಲಿ ಅದನ್ನು ಅಳವಡಿಸಿದ್ದಾರೆ. ವಿದೇಶದಲ್ಲಿ ಶಿಷ್ಯರನ್ನು ಹೊಂದಿರುವ ಗಣೇಶ ಭಟ್ ಶಿಲ್ಪಕಲಾಶಾಲೆಯನ್ನು ನಡೆಸುತ್ತಿದ್ದಾರೆ. ವಿದೇಶಿ ಪ್ರಭಾವವಿಲ್ಲದೇ ತಮ್ಮ ವಿಶಿಷ್ಟ ಶುದ್ಧ ಭಾರತೀಯ ಶೈಲಿಯ ಶಿಲ್ಪದಲ್ಲಿ ಪರಿಣಿತರಾಗಿರುವ ಗಣೇಶ ಭಟ್ ದೇಶದ ಶಿಲ್ಪಿಗಳಲ್ಲಿ ಅಗ್ರ ಗಣ್ಯರಲ್ಲಿ ಒಬ್ಬರು.
ಕೆರೆಮನೆ ಶಿವಾನಂದ ಹೆಗಡೆ:
ಕೆರೆಮನೆ ಶಿವರಾಮ ಹೆಗಡೆಯವರು ಜಿಲ್ಲೆಯ ಯಕ್ಷಗಾನ ಕಲಾಪರಂಪರೆಯನ್ನು ಶಿರೋಧಾರಣ ಮಾಡಿ ಸಕಲ ಕಷ್ಟಗಳನ್ನು ಎದುರಿಸುತ್ತಾ ಕಲಾಪರಂಪರೆಗೆ ಶಾಶ್ವತ ನೆಲೆ ಕಲ್ಪಿಸಿದವರು. ಅವರ ಮಗ ಶಂಭು ಹೆಗಡೆ ವಿಶ್ವದಾದ್ಯಂತ ಪರಂಪರೆಯ ಯಕ್ಷಗಾನವನ್ನು ಒಯ್ದವರು. ಮೇಳ ಕಟ್ಟಿ ಹೊಸ ಪ್ರಯೋಗಗಳನ್ನು ಮಾಡಿ ಯಕ್ಷಗಾನಕ್ಕಾಗಿಯೇ ಪ್ರಥಮ ಕಲಾಕೇಂದ್ರ ವನ್ನು ಸ್ಥಾಪಿಸಿದವರು. ಅವರ ಮಗ ಶಿವಾನಂದ ಹೆಗಡೆ ತಂದೆಯ ಪರಂಪರೆಯನ್ನು ಮುಂದುವರಿಸಿದ್ದಾರೆ.