ಕರಾವಳಿ-ಉತ್ಸವದಲ್ಲಿ ಹೆಲಿಕ್ಯಾಪ್ಟರ್ ಜಾಲಿ ರೈಡ್ ಗೆ ಸತೀಶ್-ಕೆ. ಸೈಲ್ ಚಾಲನೆ ನೀಡಿದರು
ಕಾರವಾರ: ಕರಾವಳಿ ಉತ್ಸವದ-2025 ರ ಅಂಗವಾಗಿ ಬುಧವಾರ ಆರಂಭಗೊಂಡ ಹೆಲಿಕ್ಯಾಪ್ಟರ್ ಜಾಲಿ ರೈಡ್ ನ, ಮೊದಲ ರೈಡ್ ನಲ್ಲಿ ಕಾರವಾರದ ಆಶಾ ನಿಕೇತನ ವಿಶೇಷ ಶಾಲೆಯ ಮಕ್ಕಳು ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಹೆಲಿಕ್ಯಾಪ್ಟರ್‌ನಲ್ಲಿ ಹಾರಾಟ ಮಾಡುವ ಮೂಲಕ ಸಂಭ್ರಮಿಸಿದರು ಇದಕ್ಕೆ ಕಾರಣವಾಗಿದ್ದು ಕರ್ನಾಟಕ ಮಾರ್ಕೇಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಕೆ. ಸೈಲ್ ಮತ್ತು ಅವರ ಪುತ್ರಿ ಸಾಚಿ ಸತೀಶ್ ಸೈಲ್..
ಡಿಸೆಂಬರ್ 21 ರಂದು ನಡೆದ ಶಾಸಕ ಸತೀಶ್ ಸೈಲ್ ಅವರ ಜನ್ಮದಿನದ ಪ್ರಯುಕ್ತ ಶಾಸಕರು ಮತ್ತು ಕುಟುಂಬ ಸದಸ್ಯರು ಆಶಾ ನಿಕೇತನ ವಿಶೇಷ ಶಾಲೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದ ಮಕ್ಕಳನ್ನು ಕಂಡ ಶಾಸಕರ ಪುತ್ರಿ ಅವರಿಗೆ ಏನಾದರೂ ನೆನಪಿನಲ್ಲಿ ಉಳಿಯಬಹುದಾದ ವಿಶೇಷವಾದ ಕಾರ್ಯಕ್ರಮ ಆಯೋಜಿಸಬೇಕು ಎಂದು ಯೋಜಿಸಿದ್ದು, ಕರಾವಳಿ ಉತ್ಸವದಲ್ಲಿ ಹೆಲಿಕ್ಯಾಪ್ಟರ್ ಜಾಲಿ ರೈಡ್ ಬಂದಲ್ಲಿ ಅವರಿಗೆ ಅದರಲ್ಲಿ ಪ್ರಯಾಣ ಮಾಡುವ ಅವಕಾಶ ಒದಗಿಸಬೇಕು ಎಂದು ಚಿಂತಿಸಿದ್ದರು.
ಅದರಂತೆ ಬುಧವಾರ ಆರಂಭಗೊಂಡ ಹೆಲಿಕ್ಯಾಪ್ಟರ್ ಜಾಲಿ ರೈಡ್ ನ ವಿಶೇಷ ಶಾಲೆಯ ಮಕ್ಕಳಿಗೆ ಈ ಜಾಲಿ ರೈಡ್‌ನ ವ್ಯವಸ್ಥೆ
ಮಾಡಿದ್ದು, ಆಕಾಶಯಾನದ ಮೂಲಕ ಕಾರವಾರದ ಸೊಬಗನ್ನು ಕಣ್ತುಂಬಿಕೊಳ್ಳುವಂತೆ ಮಾಡಿದ್ದಾರೆ. ಈ ಜಾಲಿ ರೈಡ್ ನ ಸಂಪೂರ್ಣ ವೆಚ್ಚವನ್ನು ಸ್ವತ: ತಾವೇ ಭರಿಸಿದ್ದಾರೆ, ಅಲ್ಲದೇ 4 ಮಂದಿ ಪೌರಕಾರ್ಮಿಕ ಮಹಿಳೆಯರಿಗೂ ಈ ಸೌಲಭ್ಯವನ್ನು ಒದಗಿಸುವ ಮೂಲಕ ವಿಶೇಷ ಚೇತನ ಮಕ್ಕಳಿಗೆ ಮತ್ತು ಪೌರ ಕಾರ್ಮಿಕರಿಗೆ ಅವರು ಜೀವನದಲ್ಲಿ ಮರೆಯಾಗದ ಸವಿ ನೆನಪುಗಳನ್ನು ಬಿತ್ತಿದ್ದಾರೆ.