Head bandar ಅಳಿವೆಗೆ ಎದುರಾಗಿ ಉಸುಕಿನ ದಿಬ್ಬ ಏರ್ಪಟ್ಟಿರುವುದು.
- ವನ್ನಳ್ಳಿ ಹೆಡ್ ಬಂದರ್‌ನಲ್ಲಿ ಅನೈಸರ್ಗಿಕ ಮರಳ ಗುಡ್ಡ ಸೃಷ್ಟಿ
- ಹಳ್ಳದ ಹರಿವಿನ ದಿಕ್ಕು ಬದಲಾವಣೆ
ಕಡಲ ಮಾರ್ಗದ ವ್ಯಾಪಾರ ವಹಿವಾಟುಗಳಿಂದ ಹಲವು ಶತಮಾನಗಳ ಐತಿಹಾಸಿಕ ಸ್ಮರಣೆಗಳನ್ನು ಒಳಗೊಂಡಿರುವ ಪಟ್ಟಣದ ವನ್ನಳ್ಳಿ ಹೆಡ್ ಬಂದರ್ ಅಳಿವೆಯ ದ್ವಾರದುದ್ದಕ್ಕೂ ಅನೈಸರ್ಗಿಕವಾಗಿ ಉಸುಕಿನ ದಿಬ್ಬಗಳು ಸೃಷ್ಟಿಯಾಗಿ ಸಂಪೂರ್ಣ ಮುಚ್ಚಿಹೋಗುವ ಅಪಾಯ ಎದುರಾಗಿದೆ.
ವನ್ನಳ್ಳಿ ಹೆಡ್ ಬಂದರ್ ಪ್ರದೇಶವು ಬ್ರಿಟೀಷ್ ಆಡಳಿತ ಹಾಗೂ ಅದಕ್ಕೂ ಹಿಂದಿನ ಆಳರಸರ ಕಾಲದಿಂದಲೂ ಕಡಲಮಾರ್ಗದ ವ್ಯಾಪಾರ ವಹಿವಾಟಿಗೆ ಹೆಸರುವಾಸಿಯಾಗಿತ್ತು. ಸ್ವಾತಂತ್ರೊೃೀತ್ತರ ಕಾಲದಲ್ಲಿ ಹೆಡ್ ಬಂದರ್ ಅಳಿವೆಯು ಕೇವಲ ಮೀನುಗಾರಿಕೆಗೆ ಸೀಮಿತಗೊಂಡಿದ್ದರಿಂದ ವನ್ನಳ್ಳಿ ಬೀಚ್ ಹಾಗೂ ಅಳ್ವೆದಂಡೆ ಬೀಚ್ ನಡುವಿನ ಸಂಗಮವಾಗಿ ಸಮುದ್ರದ ಪ್ರಮುಖ ರಹದಾರಿಯಾಗಿ ಬಳಕೆಯಲ್ಲಿದೆ.
ಇಲ್ಲಿ ಭರತ-ಇಳಿತವನ್ನು ಅವಲಂಬಿಸಿಯೇ ಮಶೀನ್ ಬೋಟುಗಳು, ಸಾಂಪ್ರದಾಯಿಕ ನಾಡದೋಣಿಗಳು ಎಲ್ಲವೂ ಅಳಿವೆಯಿಂದ ಸಮುದ್ರಕ್ಕೆ ಹಾಗೂ ಸಮುದ್ರದಿಂದ ಅಳಿವೆಗೆ ಜಾರಬೇಕಾಗುತ್ತದೆ. ಏಕೆಂದರೆ ಸಮುದ್ರ ಸಂಗಮದಲ್ಲಿ ಸಾಕಷ್ಟು ಹೂಳು ತುಂಬಿರುವುದರಿಂದ ಮತ್ತು ಪ್ರತಿ ಮಳೆಗಾಲದಲ್ಲಿ ಸಮುದ್ರ ಸ್ವಲ್ಪ ಮುಂದಕ್ಕೆ ಬರುವದರಿಂದ ಅಪಾಯಕಾರಿ ಸ್ಥಿತಿಯ ನಡುವೆಯೂ ಯಾಂತ್ರಿಕ ಬೋಟುಗಳ ಓಡಾಟ ಮತ್ತು ಮೀನುಗಾರಿಕೆ ನಡೆದುಕೊಂಡು ಬಂದಿದೆ.
ವನ್ನಳ್ಳಿ ಬೀಚ್ ಅಂಚಿಗೆ ಹರಿದು ಸಮುದ್ರ ಸೇರುತ್ತಿರುವ ಹೆಡ್ ಬಂದರ್ ಹಳ್ಳ. ಅದರೆ ಇತ್ತೀಚೆಗೆ ಹೆಡ್ ಬಂದರ್ (Head bandar) ಅಳಿವೆ ಪ್ರವೇಶಿಸುವ ಸಂಗಮದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಶಾಲವಾದ ಉಸುಕಿನ ದಿಬ್ಬ ಸೃಷ್ಟಿಯಾಗಿದ್ದು ಅಳಿವೆಯನ್ನು ಜೋಡಿಸುವ ಹಳ್ಳದ ಹರಿವಿನ ದಿಕ್ಕನ್ನೇ ಬದಲಿಸಿದೆ. ಹಳ್ಳಕ್ಕೆ ಎದುರಾಗಿ ಸಮುದ್ರ ಕಡೆಯಿಂದ ಉಸುಕಿನ ಭೂಮಿಯೇ ಸೃಷ್ಟಿಯಾಗಿರುವದರಿಂದ ಹಳ್ಳವು ಬೀಚಿನ ಅಂಚಿನುದ್ದಕ್ಕೂ ತಾನೇ ಕೊರಕಲು ಸೃಷ್ಟಿಸಿಕೊಂಡು ಸಮುದ್ರ ಸಂಪರ್ಕ ಸಾಧಿಸಿಕೊಂಡಿದೆ. ಹೀಗಾಗಿ ಹೆಡ್ ಬಂದರು ಪ್ರದೇಶದಿಂದ ಪ್ರತಿನಿತ್ಯ ಮೀನುಗಾರಿಕೆಗೆ ಓಡಾಡುವ ಯಾಂತ್ರಿಕ ದೋಣಿಗಳು, ಬೋಟುಗಳು ಸಮುದ್ರ ಭರತದ ತುರೀಯಾವಸ್ಥೆಯಲ್ಲಿ ಮಾತ್ರ ಸಂಗಮವನ್ನು ದಾಟಲು ಸಾಧ್ಯ ಎಂಬಂತ ಸ್ಥಿತಿ ಸದ್ಯಕ್ಕೆ ಎದುರಾಗಿದೆ. ಅಳಿವೆ ದಾಟುವುದು ಅತ್ಯಂತ ಕಷ್ಟದಾಯಕ ಮತ್ತು ಅಪಾಯಕಾರಿಯೂ ಆಗಿದೆ. ಇದೇ ರೀತಿ ಮುಂದುವರೆದಲ್ಲಿ ಹೆಡ್ ಬಂದರ್ ಅಳಿವೆಯ ಮೂಲಕ ಮೀನುಗಾರಿಕೆಗೆ ಸಂಚರಿಸುವರಿಗೆ ಸಂಪೂರ್ಣವಾಗಿ ಸಮುದ್ರದೊಂದಿಗೆ ಸಂಪರ್ಕ ಕಡಿದುಕೊಳ್ಳುವ ಅಪಾಯವಿದೆ. ವನ್ನಳ್ಳಿ ಬೀಚ್‌ನ ಸಹಜ ಸೌಂದರ್ಯ ಹಾಗೂ ಸಾರ್ವಜನಿಕರ ಈಜಾಟದ ಮೋಜಿಗೂ ಮೊದಲಿದ್ದ ಸ್ಥಳಾವಕಾಶ ಈಗಿಲ್ಲದಂತಾಗಿದೆ.
ವನ್ನಳ್ಳಿ ಹೆಡ್ ಬಂದರ್ (Head bandar ) ಸಂಗಮದಲ್ಲಿ ಇತ್ತೀಚೆಗೆ ಮೀನುಗಾರಿಕೆಯ ದ್ವಾರ ಬಹುತೇಕ ಕಟ್ಟಿಹೋಗಿದೆ. ಹೊನ್ಮಾಂವ ಸೇತುವೆ ನಿರ್ಮಾಣ ಕಾಮಗಾರಿಯಿಂದ ಹಳ್ಳದ ಹರಿವು ನಿಯಂತ್ರಿಸಲ್ಪಟ್ಟಿದ್ದರಿಂದ ಹೀಗಾಗಿರುವುದು ಸ್ಪಷ್ಟ. ಬಹಳ ವರ್ಷಗಳಿಂದ ನಾವು ಸಂಗಮದಲ್ಲಿ ಹೂಳೆತ್ತಿ ಮೀನುಗಾರಿಕೆಗೆ ಅನುಕೂಲ ಮಾಡಿಕೊಂಡುವಂತೆ ಸರ್ಕಾರಗಳಿಗೆ ವಿನಂತಿಸುತ್ತಿದ್ದರೂ ಈವರೆಗೆ ಯಾವುದೇ ಕಾಮಗಾರಿ ನಡೆದಿಲ್ಲ. ಈಗಲಂತೂ ಹೊನ್ಮಾಂವ ಸೇತುವೆ ಕಾಮಗಾರಿ ಬೇಗನೆ ಮುಗಿಯದಿದ್ದರೆ ನಮ್ಮ ಕಡಲ ಮಕ್ಕಳು ಅಕ್ಷರಶಃ ಅನಾಥರಾಗುತ್ತಾರೆ. ಹೊನ್ಮಾಂವ ಸೇತುವೆ ನಿರ್ಮಾಣವೂ ಅನಿವಾರ್ಯವಾದ್ದರಿಂದ ಅಳಿವೆಯ ಸಂಗಮದ ಕಷ್ಟ ಸಹಿಸಿಕೊಂಡಿದ್ದೇವೆ. ಶೀಘ್ರ ಸೇತುವೆ ಕಾಮಗಾರಿ ಮುಗಿಯಲಿ ಮತ್ತು ಅಳಿವೆಯ ಉಸುಕಿನ ದಿಬ್ಬ ತೆರವಾಗಿ ಹೂಳಿನ ಸಮಸ್ಯೆಗೂ ಪರಿಹಾರ ಸಿಗುವಂತಾಗಲೆಂದು ಆಶಿಸುತ್ತೇವೆ.
— ಜೈವಿಠ್ಠಲ ಕುಬಾಲ, ಕುಮಟಾ ಮೀನುಗಾರರ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ
ಯಾಕೆ ಹೀಗಾಯ್ತು?
ಹೆಡ್ ಬಂದರ್(Head bandar ) ಹಳ್ಳವು ಹರಿದು ಬರುವಲ್ಲಿ ಹೊನ್ಮಾಂವ್ ಸೇತುವೆ(ರಾ.ಹೆ.66ರಲ್ಲಿ) ನಿರ್ಮಾಣ ಕಾಮಗಾರಿ ಶುರುವಾದಲ್ಲಿಂದ ಈ ಸಮಸ್ಯೆ ನಿಧಾನವಾಗಿ ಚಿಗುರಿಕೊಂಡು ಕೆಲವೇ ದಿನದಲ್ಲಿ ಇಂದಿನ ಸ್ಥಿತಿ ತಲುಪಿದೆ. ಭರತ-ಇಳಿತದೊಟ್ಟಿಗೆ ಹೊಂದಿಕೊಂಡಿದ್ದ ಹಳ್ಳದ ಹರಿವು ಬದಲಾಗಿದ್ದೇ ಅಳಿವೆಯ ಸಂಗಮದಲ್ಲಿ ಅಡ್ಡಡ್ಡ ಉಸುಕಿನ ದಿಬ್ಬ ನಿರ್ಮಾಣಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೇ ಸಮುದ್ರದ ಭರತದ ಅಲೆಗಳು ಅಳಿವೆಯ ಒಳಕ್ಕೂ ಹೆಡ್ ಬಂದರಿನಲ್ಲಿ ಸಾಕಷ್ಟು ಉಸುಕನ್ನು ಹೊತ್ತೊಯ್ದು ದಿಬ್ಬಗಳನ್ನು ಸೃಷ್ಟಿಸುತ್ತಿರುವುದು ಭವಿಷ್ಯದಲ್ಲಿ ಇನ್ನಷ್ಟು ಆತಂಕಕಾರಿ ಸ್ಥಿತಿಗೆ ಮುನ್ನುಡಿ ಬರೆಯುತ್ತಿದೆ.