ಸಾತೇರಿ ದೇವಸ್ಥಾನ  
ಉತ್ತರ ಕನ್ನಡ

ಸಾತೇರಿ ದೇವಿಯ ವಾರ್ಷಿಕೋತ್ಸವಕ್ಕೆ ಚಾಲನೆ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆಯುವ ದೇವಸ್ಥಾನ
  • ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ
  • ಸೆ.20 ರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ
ಕಾರವಾರ: ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ ಹಣಕೋಣದ ಶ್ರೀ ಸಾತೇರಿ ದೇವಿಯ ವಾರ್ಷಿಕ ಉತ್ಸವವು ಸೆ. 18 ರಿಂದ 24 ರವರೆಗೆ ಜರುಗಲಿದೆ.
ಪವಾಡಗಳ ಮೂಲಕ ಹೆಸರಾಗಿರುವ ಸಾತೇರಿ ದೇವಿಯ ಉತ್ಸವದ ಸಂದರ್ಭದಲ್ಲಿ ಸಾವಿರಾರು ಜನ ದರ್ಶನ ಪಡೆಯುವ ನಿರೀಕ್ಷೆ ಇದೆ. ಭಕ್ತರಿಗೆ ಪ್ರಸಾದ ಭೋಜನ, ಪಾರ್ಕಿಂಗ್ ಸೌಲಭ್ಯ, ನೆರಳಿಗೆ ಪೆಂಡಾಲ್ ಸೇರಿ, ಸಕಲ ಸೌಲಭ್ಯಗಳನ್ನು ಕಲ್ಪಿಸಲು ಆಡಳಿತ ಸಮಿತಿ ಎಲ್ಲ ಸಿದ್ಧತೆಗಳನ್ನು ನಡೆಸಿದೆ.
ಸೆ.18 ರಾತ್ರಿ 12 ಗಂಟೆಗೆ ದೇವಿಯ ಗರ್ಭಗುಡಿಯ ಬಾಗಿಲು ತೆರೆಯಲಿದೆ. ತಾನಾಗಿಯೇ ಬಾಗಿಲು ತೆರೆದುಕೊಳ್ಳುತ್ತದೆ ಎಂಬುದು ಭಕ್ತರ ನಂಬಿಕೆ. ಸೆ.19 ಊರವರಿಂದ ನವೆ (ಪೂಜೆ) ಅರ್ಪಿಸುವುದು, ಸಾಯಂಕಾಲ 4 ಗಂಟೆಗೆ ಕುಳಾವಿ(ಸ್ಥಳೀಯ ನಿರ್ದಿಷ್ಟ ಕುಟುಂಬಗಳ ಭಕ್ತರು) ಗಳಿಂದ ತುಳಯಿ ಅರ್ಪಣೆ ಹಾಗೂ ಕುಮಾರಿ ಹಾಗೂ ನವ ವಧುಗಳಿಂದ ಅಡಕಿ ಅರ್ಪಣೆ ನಡೆಯಲಿದೆ.
ಸೆಪ್ಟೆಂಬರ್ 20 ರ ಬೆಳಗ್ಗೆ 8 ಗಂಟೆಯಿAದ ಸೆ.24 ರ ಸಾಯಂಕಾಲ 5 ಗಂಟೆಯವರೆಗೆ ಎಲ್ಲ ಭಕ್ತಾದಿಗಳಿಗೆ ದೇವಿಯ ದರ್ಶನ, ಹಣ್ಣು-ಕಾಯಿ, ಉಡಿ ಹರಕೆ, ತುಲಾಭಾರ ಸೇವೆ ಜರುಗಲಿದೆ. ಸೆ. 20ರ ಬೆಳಗ್ಗೆ 8 ಗಂಟೆಯಿAದ 24 ರವರೆಗೆ ಪ್ರತಿ ದಿನ ದೇವರಿಗೆ ಅರ್ಪಿಸುವ ಸೀರೆ ಹಾಗೂ ಇತರೆ ವಸ್ತುಗಳನ್ನು ಲಿಲಾವು ಮಾಡಲಾಗುವುದು.
ಸೆ.21 ರಿಂದ 24 ರವರೆಗೆ ಪ್ರತಿ ದಿನ ಬೆಳಗ್ಗೆ 9 ರಿಂದ ಸಾಯಂಕಾಲ 4 ಗಂಟೆಯವರೆಗೆ ಎಲ್ಲ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಸೆ.21 ರಿಂದ 23 ರವರೆಗೆ ಪ್ರತಿ ದಿನ ಸಾಯಂಕಾಲ 6.30 ರಿಂದ ವಿವಿಧ ಭಜನಾ ಮಂಡಳಿಯವರಿAದ ಭಜನಾ ಕಾರ್ಯಕ್ರಮ ಜರುಗಲಿದೆ. ರಾತ್ರಿ 9.30 ರವರೆಗೆ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ಆಡಳಿತ ಸಮಿತಿ ತಿಳಿಸಿದೆ.

ಇಷ್ಟಾರ್ಥ ಸಿದ್ಧಿಸುವ ದೇವಿ

ದುಷ್ಟನ ಕೆಟ್ಟ ಕಣ್ಣಿಗೆ ಗುರಿಯಾದ ನಾರಿ ಬಾವಿಗೆ ಹಾರಿ ಮಾನ ಉಳಿಸಿಕೊಂಡಳು. ನಂತರ ಆಕೆಯಿಂದ ನಡೆದ ಪವಾಡಗಳ ಕಾರಣ ಅದೇ ಸ್ಥಳದಲ್ಲಿ ಆಕೆಗೆ ದೇವಸ್ಥಾನ ನಿರ್ಮಿಸಿ, ಪೂಜಿಸಲಾಯಿತು ಎಂಬುದು ಪ್ರತೀತಿ. ಸಾತೇರಿ ದೇವಿಯ ಫೋಟೋ ತೆಗೆಯುವಂತಿಲ್ಲ. ಆಕೆಯ ಎದುರು ಸುಳ್ಳು, ಮೋಸ ನಡೆಯುವುದಿಲ್ಲ ಎಂಬುದು ಊರಿನ ಜನರ ನಂಬಿಕೆ. ಆಕೆ ಇಷ್ಟಾರ್ಥಗಳನ್ನು ಸಿದ್ಧಿಸುತ್ತಾಳೆ ಎಂಬ ಕಾರಣಕ್ಕೆ ವಿವಿಧ ರಾಜ್ಯಗಳ ಸಾವಿರಾರು ಜನ ವಾರ್ಷಿಕ ಉತ್ಸವದ ದಿನ ಬಂದು ದರ್ಶನ ಪಡೆಯುತ್ತಾರೆ. ಹರಕೆ ಒಪ್ಪಿಸುತ್ತಾರೆ.

ನೂತನ ದೀಪ ಸ್ತಂಭ

ಸಾತೇರಿ ದೇವಸ್ಥಾನದ ಎದುರು ನೂತನ ದೀಪ ಸ್ತಂಭವನ್ನು ಸ್ಥಾಪಿಸಲಾಗಿದೆ. ಸುಮಾರು 30 ಅಡಿ ಎತ್ತರದ ಶಿಲಾಮಯ ಸ್ತಂಭವನ್ನು ಕಾರ್ಕಳದ ಶಿಲೆಯಿಂದ ಕೆತ್ತಲಾಗಿದೆ. ಮುರ್ಡೇಶ್ವರದ ಶಿಲ್ಪಿ ಕೇಶವ ನಾಯ್ಕ ಅವರು ಸುಂದರ ಕೆತ್ತನೆ ಮಾಡಿದ್ದಾರೆ. ಶಿಲಾ ಸ್ತಂಭದ ಮೇಲೆ ದೇವಿಯ ವಾಹನ ಸಿಂಹದ ಮೂರ್ತಿ ಇದೆ. ಇತ್ತೀಚೆಗೆ ಶುದ್ಧಿ ಕಾರ್ಯ ನಡೆಸಿ, ಅದನ್ನು ಪ್ರತಿಷ್ಠಾಪಿಸಲಾಯಿತು.