ಕಾರವಾರ: ರೌಡಿಯೊಬ್ಬ ಕುಡಿದ ಮತ್ತಿನಲ್ಲಿ ಪೊಲೀಸ್ ಸಿಬ್ಬಂದಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಸಿದಂತೆ ಹಳಿಯಾಳ ಪಿಎಸ್‌ಐ ಬಸವರಾಜ ಮಬನೂರು ಅವರನ್ನು ಅಮಾನತು ಮಾಡಿ ಎಸ್‌ಪಿ ದೀಪನ್ ಆದೇಶ ಹೊರಡಿಸಿದ್ದಾರೆ.
ಜೂನ್ 15 ರಂದು ಘಟನೆ ನಡೆದಿತ್ತು. ಹಳಿಯಾಳ ಶಹರದ ಮೌರ್ಯ ಹೋಟೆಲ್ ಎದುರು ರೌಡಿ ಶೀಟರ್ ನೀರಲಗಾ ಗ್ರಾಮದ ಮಂಜುನಾಥ ಅರೆಬೆತ್ತಲಾಗಿ ಓಡಾಡುತ್ತಿದ್ದ ಅದನ್ನು ಪ್ರಶ್ನಿಸಿದ ಹಳಿಯಾಳ ಠಾಣೆ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗಲಾಟೆಯ ವಿಡಿಯೋ ವೈರಲ್ ಆಗಿತ್ತು. ಸ್ಥಳದಲ್ಲೇ ಇದ್ದ ಹಳಿಯಾಳ ಪಿಎಸ್‌ಐ ಬಸವರಾಜ ಜೀಪಿನಲ್ಲೇ ಕುಳಿತಿದ್ದರೂ ಕ್ರಮ ವಹಿಸದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಘಟನೆಯ ನಂತರ ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಪಿಎಸ್‌ಐ ಬಸವರಾಜ ಮಬನೂರ ಅವರು ಮಂಜುನಾಥ್ ವಿರುದ್ಧ ದೂರು ನೀಡಿದ್ದಾರೆ. ಆದರೆ, ಮಂಜುನಾಥ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಬೇಕಿದೆ.
ಎಸ್‌ಪಿ ದೀಪನ್ ಜೂನ್ 16 ರಂದು ರಾತ್ರಿ ಸ್ವತಃ ಸ್ಥಳಕ್ಕೆ ಭೇಟಿ ನೀಡಿದ್ದರು. ಪಿಎಸ್‌ಐ, ಇನ್ಸ್ಪೆಕ್ಟರ್ ಹಾಗೂ ಎಲ್ಲ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಇಲಾಖಾ ವಿಚಾರಣೆಗೆ ಆದೇಶ ಮಾಡಿದ್ದು, ಪಿಎಸ್‌ಐ ಅವರನ್ನು ಅಮಾನತು ಮಾಡಿದ್ದಾರೆ. ೮ ಸಿಬ್ಬಂದಿಯನ್ನು ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ವಿರುದ್ಧವೂ ಇಲಾಖೆ ವಿಚಾರಣೆಗೆ ಆದೇಶಿಸಿದ್ದಾರೆ.
ಹಳಿಯಾಳದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿರುವ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆ ರೌಡಿ ಶೀಟರ್ ಬಹಿರಂಗವಾಗಿ ಅರೆಬೆತ್ತಲಾಗಿ ನಿಂತು ಪೊಲೀಸರಿಗೆ ಸವಾಲು ಹಾಕುವುದು ಕಾನೂನು ಸುವ್ಯವಸ್ಥೆಯ ಬಗ್ಗೆ ಜನ ಆಡಿಕೊಳ್ಳುವಂತಾಗಿತ್ತು. ಇದರಿಂದ ಎಸ್‌ಪಿ ದೀಪನ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.