ಹಳಿಯಾಳ ಪಟ್ಟಣದಲ್ಲಿ ರಸ್ತೆ ಬದಿ ಮಾವಿನ ಕಾಯಿ ಮಾರಾಟಕ್ಕೆ ಇಟ್ಟಿರುವುದು.
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಲಹೆ
- ಕಳ್ಳತನ, ಅನಧಿಕೃತ ಖರೀದಿಗೆ ಕಡಿವಾಣ
ಹಳಿಯಾಳ: ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಮಾವಿನಕಾಯಿ ವ್ಯಾಪಾರ ವಹಿವಾಟು ಪ್ರಾರಂಭವಾಗಿದೆ. ತೋಟದಲ್ಲಿ ಮಾವಿನಕಾಯಿ ಕಳ್ಳತನ ತಡೆಗಟ್ಟಲು ಹಾಗೂ ಅನಧಿಕೃತ ಖರೀದಿಗೆ ಕಡಿವಾಣ ಹಾಕಲು ಹಳಿಯಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂದಾಗಿದೆ.
ರೈತರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ತಹಸೀಲ್ದಾರ್ ಕಚೇರಿಯಲ್ಲಿ ಮಾವಿನಕಾಯಿ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯ ನಡವಳಿಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿಗಳು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಧಿಕೃತ ಪತ್ರದ ಮೂಲಕ ತಿಳಿಸಿದ್ದಾರೆ.
ತಾಲೂಕಿನ ಅನೇಕ ಹಳ್ಳಿಗಳಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ಮಾವಿನಕಾಯಿ ಖರೀದಿ ವ್ಯವಹಾರದಲ್ಲಿ ತೊಡಗಿರುವವರ ಮೇಲೆ ಕಠಿಣ ಕ್ರಮ ಜರುಗಿಸಲು ಸಭೆಯಲ್ಲಿ ಸೂಚಿಸಲಾಗಿದೆ. ಈ ಕುರಿತು ಎಲ್ಲ ಪಿಡಿಒಗಳು ಕೂಡಲೇ ತಮ್ಮ ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳಲ್ಲಿ ಜಿಂಗಲ್ಸ್ ಮೂಲಕ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೋರಿದೆ. ಜತೆಗೆ ರೈತರ ಅನುಕೂಲಕ್ಕಾಗಿ ಎಪಿಎಂಸಿಯಲ್ಲಿ ಮಾವಿನಕಾಯಿ ಮಾರಾಟದ ಅವಧಿಯನ್ನು ಬೆಳಗ್ಗೆ 10ರಿಂದ ರಾತ್ರಿ 10 ರವರೆಗೆ ಅವಕಾಶ ಕಲ್ಪಿಸಲಾಗಿದೆ.
"
ಮಾವಿನಕಾಯಿಗಳನ್ನು ರೈತರು ರಸ್ತೆ ಬದಿಯಲ್ಲಿ ಅನಧಿಕೃತ ವ್ಯಾಪಾರಿಗಳಿಗೆ ಮಾರಾಟ ಮಾಡಬಾರದು. ನೇರವಾಗಿ ಹಳಿಯಾಳ ಎಪಿಎಂಸಿಗೆ ತಂದು ಮಾರಾಟ ಮಾಡಬೇಕು. ಇದರಿಂದ ಕಳ್ಳತನದ ಭೀತಿಯೂ ತಪ್ಪುತ್ತದೆ ಮತ್ತು ಉತ್ತಮ ಬೆಲೆಯೂ ಸಿಗುತ್ತದೆ. ಸುಮಿತ್ರಾ ಹಾವನ್ನವರ್ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ
ಅಳಿದುಳಿದ ಬೆಳೆಗೆ ಕಳ್ಳರ ಕಾಟ
ಈ ಬಾರಿ ಅಕಾಲಿಕವಾಗಿ ಭಾರಿ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದ ಹಳಿಯಾಳ ತಾಲೂಕಿನ ಶೇ. 80ರಷ್ಟು ಮಾವಿನ ಬೆಳೆ ಹಾನಿಯಾಗಿದೆ. ತಾಲೂಕಿನಲ್ಲಿ ಮಾವಿನ ಕೊರತೆ ಇದೆ. ಹೀಗಾಗಿ, ಅಲ್ಲಲ್ಲಿ ಉಳಿದ ಮಾವಿನ ಕಾಯಿಗಳನ್ನು ಕೆಲವರು ಕಳ್ಳತನ ಮಾಡಿ ರಸ್ತೆ ಬದಿ ಅನಧಿಕೃತವಾಗಿ ಮಾವು ಮಾರಾಟ ಮಾಡುತ್ತಿದ್ದಾರೆ. ಇದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಬೆಳೆಗಾರರು ಇನ್ನಷ್ಟು ನಷ್ಟ ಅನುಭವಿಸಬೇಕಾಗಿದೆ ಎಂಬುದು ರೈತರ ಅಳಲು.