ಹಳಿಯಾಳದಲ್ಲಿ ಬಾಂಬ್‌ ನಿಂದ ಹಾನಿಯಾದ ಮನೆ  
ಉತ್ತರ ಕನ್ನಡ

ಹಳಿಯಾಳದಲ್ಲಿ ಕೆರೆಯ ಸಮೀಪ ಮತ್ತೆರಡು ಜೀವಂತ ಬಾಂಬ್‌ಗಳು ಪತ್ತೆ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಹಳಿಯಾಳ ಕಾಳಗಿನಕೊಪ್ಪ ಗ್ರಾಮದಲ್ಲಿ ಘಟನೆ
  • ಕಾಡು ಪ್ರಾಣಿಗಳನ್ನು ಹೊಡೆಯಲು ಸಂಗ್ರಹಿಸಿದ್ದ ಬಾಂಬ್‌ ಸ್ಫೋಟ
  • ಕೆರೆಯ ಸಮೀಪ ಎರಡು ಜೀವಂತ ಬಾಂಬ್‌ಗಳು ಪತ್ತೆ
ಹಳಿಯಾಳ: ಕಾಳಗಿನಕೊಪ್ಪ ಗ್ರಾಮದಲ್ಲಿ ನಾಡ ಬಾಂಬ್ ಸೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರೆಯ ಸಮೀಪ ಮತ್ತೆರಡು ಜೀವಂತ ನಾಡ ಬಾಂಬ್‌ಗಳು ದೊರೆತಿದ್ದವು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ಬೆಳಗಿನಜಾವ 5 ಗಂಟೆಯ ಹೊತ್ತಿಗೆ ಗ್ರಾಮದ ವಾಸು ರಾಯಪ್ಪ ಕೊರವರ ಅವರ ಮನೆಯಲ್ಲಿ ಸ್ಪೋಟ ಸಂಭವಿಸಿತ್ತು.ಇಡೀ ಊರು ಭಯಭೀತವಾಗಿತ್ತು. ಸ್ಫೋಟದ ರಭಸಕ್ಕೆ ವಸಂತ ಕೊರವರ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿ ಗೋಡೆಗಳು ಬಿದ್ದಿವೆ ಅಲ್ಲದೆ ಸ್ಫೋಟದ ರಭಸಕ್ಕೆ ಪಕ್ಕದ ಮನೆಯಾದ ಮಾರುತಿ ಅಪ್ಪಯ್ಯ ಬಿಡದೋಳಕರ ಹಾಗೂ ಪಕ್ಕದವರ ಮನೆಯ ಹಂಚು, ಅಡುಗೆ ಮನೆಯ ಕಿಟಕಿ, ಸುತ್ತಮುತ್ತಲಿನ ಮನೆಗಳ ಬಾಗಿಲು-ಕಿಟಕಿಗಳು ಒಡೆದು ಲಕ್ಷಾಂತರ ರೂ. ಹಾನಿ ಸಂಭವಿಸಿದ್ದವು. ಆ ಮನೆ ಸುತ್ತಲಿನ ಮನೆಗಳಿಗೂ ಭಾರಿ ಹಾನಿಯಾಗಿತ್ತು. ಮನೆಯ ಮಾಲೀಕ ವಾಸು ರಾಯಪ್ಪ ಕೊರವರ್ ಹಾಗೂ ಮಗ ಮುನೇಶ್ವರ ಕೊರವರ ಓಡಿ ಹೋಗುವಾಗ ಬಾಂಬ್‌ಗಳನ್ನು ಊರಿನ ಕೆರೆಯ ಸಮೀಪ ಎಸೆದು ಹೋಗಿದ್ದರು ಎನ್ನಲಾಗಿದೆ. ಅದನ್ನು ಸೋಮವಾರವೇ ಪೊಲೀಸರು ವಶಕ್ಕೆ ಪಡೆದಿದ್ದರು.
ಮಂಗಳವಾರ ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಟ್ರಿಯ ದಳದವರು ಎರಡು ಬಾಂಬ್‌ಗಳನ್ನು ನಿಷ್ಕ್ರಿಯ ಮಾಡಿದ್ದರು. ಮನೆ ಹಾಗೂ ಊರಿನ ವಿವಿಧೆಡೆ ಇಡೀ ದಿನ ಹುಡುಕಾಟ ನಡೆಸಿದರು. ಆದರೆ, ಯಾವುದೇ ಜೀವಂತ ಬಾಂಬ್‌ಗಳು ಪತ್ತೆಯಾಗಿಲ್ಲ. ಮನೆಯಲ್ಲಿ ಬಾಂಬ್ ತಯಾರಿಕೆಗೆ ಬಳಸುತ್ತಿದ್ದ ಪೌಡರ್‌ಗಳು ಪತ್ತೆಯಾಗಿವೆ ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಕಾಡು ಪ್ರಾಣಿಗಳ ಎಲುಬುಗಳು ಪತ್ತೆಯಾಗಿವೆ. ಅವುಗಳನ್ನೂ ಪೊಲೀಸರು ವಶಕ್ಕೆ ಪಡೆದು ಸ್ಥಳ ಮಹಜರು ನಡೆಸಿದ್ದಾರೆ. ಅವುಗಳನ್ನು ನಂತರ ಅರಣ್ಯಾಧಿಕಾರಿಗಳಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರವೂ ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಹಳಿಯಾಳ ಪಿಐ ಜಯಪಾಲ ಪಾಟೀಲ, ಪಿಎಸ್‌ಐ ಚಂದ್ರು ಮಾಳಿ ಸ್ಥಳದಲ್ಲಿದ್ದು, ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.