ಶಿರಸಿಯ ಲೀಡ್ಕರ್ ಕಾಲನಿ ನಿವಾಸಿಗಳಿಗಾಗಿ ನಿರ್ಮಿಸುತ್ತಿರುವ ವಸತಿ ಸಮುಚ್ಛಯ ಅರ್ಧಂಬರ್ಧ ಆಗಿರುವುದು.
- ಶಿರಸಿ ಲೀಡ್ಕರ್ ಕಾಲನಿ ನಿವಾಸಿಗಳಿಗೆ ನಿರಾಶೆ
- 3.60 ಕೋಟಿ ರೂ. ವೆಚ್ಚದಲ್ಲಿ 60 ಮನೆ ನಿರ್ಮಾಣ
ಶಿರಸಿ: ಚರ್ಮೋದ್ಯೋಗದಲ್ಲಿ ತೊಡಗಿರುವ ನಗರದ ಲೀಡ್ಕರ್ ಕಾಲನಿ ನಿವಾಸಿಗಳಿಗೆ ಮೂಲಸೌಕರ್ಯದ ಕೊರತೆ ಕಾಡಿದೆ. ವಸತಿ ನಿಲಯಗಳು ಹಾಗೂ ಕಾರ್ಯಾಗಾರ ಕಟ್ಟಡ ನಿರ್ಮಾಣ ಕಳೆದ ಒಂದು ವರ್ಷದಿಂದ ಅರ್ಧಕ್ಕೇ ನಿಂತಿದ್ದು, ಇಲ್ಲಿಯ ನಿವಾಸಿಗಳಿಗೆ ನಿರಾಸೆ ಮೂಡಿಸಿದೆ.
ಸುಮಾರು 60 ಮನೆಗಳ ನಿವಾಸಿಗಳು ಬಹು ಹಿಂದಿನಿಂದಲೂ ಇಲ್ಲಿ ವಾಸ್ತವ್ಯ ಮಾಡಿಕೊಂಡು ಚರ್ಮೋದ್ಯಮ ನಡೆಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಆರ್ಥಿಕವಾಗಿಯೂ ಬಡವರಿದ್ದಾರೆ. ಅಂದಿನ ಆದಾಯ ಅಂದೇ ಸಾಕಾಗದ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಇಲ್ಲಿನ ನಿವಾಸಿಗಳು ತಮಗೊಂದು ಸ್ವಂತ ಸೂರು ನೀಡಿ, ನಮ್ಮ ಜಾಗದ ಹಕ್ಕನ್ನು ನಮಗೆ ನೀಡಿ ಎಂದು ಹಲವಾರು ಬಾರಿ ಹೋರಾಟ ನಡೆಸಿದ್ದರು.
ಲೀಡ್ಕರ್ ಕಾಲನಿಯ ಜಾಗ ಅರ್ಧ ನಗರಸಭೆ ವ್ಯಾಪ್ತಿಗೆ, ಇನ್ನರ್ಧ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕಾರಣ ನಿಗದಿತ ಯಾವ ಸೌಲಭ್ಯವೂ ಸಂಪೂರ್ಣವಾಗಿ ಇಲ್ಲಿಯ ಜನತೆಗೆ ತಲುಪುತ್ತಿರಲಿಲ್ಲ. ಅಂತೂ ಇಂತೂ 2023ರಲ್ಲಿ ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲೀಡ್ಕರ್)ದ ವತಿಯಿಂದ ಇಲ್ಲಿನ ಅಂಡಗಿ ರಸ್ತೆಯ ಲಿಡ್ಕರ್ ಕಾಲನಿಯ ನಿವಾಸಿಗಳಿಗೆ ಅಪಾರ್ಟ್‌ಮೆಂಟ್ ಮಾದರಿಯಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ.
ಚರ್ಮ ಕುಶಲಕರ್ಮಿಗಳು ತಮ್ಮ ವೃತ್ತಿಯನ್ನು ಮುಂದುವರಿಸಲು ಮತ್ತು ಉತ್ತಮ ಜೀವನ ನಡೆಸಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು ಈ ಯೋಜನೆ ಉದ್ದೇಶವಾಗಿದೆ. ಆದರೆ, ಮನೆಗಳ ನಿರ್ಮಾಣದಲ್ಲೇ ಗುತ್ತಿಗೆದಾರರು ನಿರ್ಲಕ್ಷ್ಯ ತೋರುತ್ತಿದ್ದು, ಕಳೆದ ಒಂದು ವರ್ಷದಿಂದ ಮನೆ ಮತ್ತು ಕಾರ್ಯಾಗಾರ ಕಟ್ಟಡ ನಿರ್ಮಾಣ ಅರಬರೆಯಾಗಿ ನಿಂತಿದೆ.
ಕಾಲನಿಯಲ್ಲಿ 3.60 ಕೋಟಿ ರೂ. ವೆಚ್ಚದಲ್ಲಿ 60 ಮನೆಗಳ ನಿರ್ಮಾಣ ಕಾರ್ಯ ನಡೆದಿದೆ. ಸರ್ಕಾರ ಪ್ರತಿ ಮನೆ ನಿರ್ಮಾಣಕ್ಕೆ 6 ಲಕ್ಷ ರೂ. ಅನುದಾನ ನೀಡುತ್ತಿದೆ. ಆ ಹಣ ಬಳಸಿ ಮೊದಲು ಎಲ್ಲವೂ ವೇಗವಾಗಿ ನಡೆದಿತ್ತು. ಕ್ರಮೇಣ ಕೆಲಸ ನಿಂತಿದೆ. ಒಂದು ವರ್ಷದಿಂದ ಇಲ್ಲಿ ಯಾವುದೇ ಕೆಲಸಗಾರರು ಬಂದಿಲ್ಲ. ಹೀಗಾಗಿ, ಮನೆಯ ಕಿಟಕಿ, ಬಾಗಿಲು ಕೂರಿಸುವ ಕಾರ್ಯ ನಡೆದಿಲ್ಲ. ವಿದ್ಯುತ್, ನೀರಿನ ಸಂಪರ್ಕ ಆಗಿಲ್ಲ. ಜತೆಗೆ ಬಣ್ಣ ಬಡಿಯಲು ಸಹ ಗುತ್ತಿಗೆದಾರರು ಆಸಕ್ತಿವಹಿಸಿಲ್ಲ. ಇದರಿಂದ ಇಡೀ ಸಮುಚ್ಛಯ ಹಾಳುಬಿದ್ದಂತೆ ಭಾಸವಾಗುತ್ತಿದೆ’ ಎನ್ನುತ್ತಾರೆ ಸ್ಥಳಿಯರು.
ಇಕ್ಕಟ್ಟಾದ ಪ್ರದೇಶದಲ್ಲಿ ಮನೆ ನಿರ್ಮಾಣ ಕಾರ್ಯ ನಡೆದಿದೆ. ಸಿಮೆಂಟ್ ರಸ್ತೆ ಸಹ ಕಳಪೆಯಾಗಿದ್ದು ಈಗಾಗಲೇ ಕಿತ್ತು ಹಾಳಾಗಿದೆ. ಕಾಂಪೌಂಡ್ ಕುಸಿದು ಬಿದ್ದಿದೆ. ಎಲ್ಲಾ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಂತರವೇ ಅದನ್ನು ಹಂಚಿಕೆ ಮಾಡಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿಯಾದ ಕಿರಣ ಪಾವಸ್ಕರ್.
ಹಲವು ದಶಕದಿಂದ ಲೀಡ್ಕರ್ ಕಾಲನಿಯಲ್ಲಿ ವಾಸವಾಗಿರುವ 60 ಕುಟುಂಬಗಳ ಹೊರತಾಗಿ ಇನ್ನೂ 24 ಕುಟುಂಬಗಳಿವೆ. ಆದರೆ, ಅವರ ಮನೆಯ ಭೂಮಿ ನಿವಾಸಿಗಳ ಹೆಸರಿಗೆ ಆಗಿಲ್ಲ. ತಕ್ಷಣ ಮನೆಯ ಹಕ್ಕುಪತ್ರ ನೀಡುವ ಕೆಲಸ ಆಗಬೇಕು.