ಬನವಾಸಿ ಭಾಗದ ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ರೈತರು ಮತ್ತು ಬಿಜೆಪಿ ಕಾರ್ಯಕರ್ತರು ಶಿರಸಿಯ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅನಂತಮೂರ್ತಿ ಹೆಗಡೆ, ಉಷಾ ಹೆಗಡೆ, ರಮೇಶ ನಾಯ್ಕ, ಶಂಕರ ಗೌಡ, ಚಂದ್ರಶೇಖರ ಗೌಡ ಇತರರಿದ್ದರು.  
ಉತ್ತರ ಕನ್ನಡ

Grid 5 ವರ್ಷವಾದ್ರೂ ಕಾರ್ಯಾರಂಭಿಸದ ಗ್ರಿಡ್

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಬನವಾಸಿ ಭಾಗದ ಕರೆಂಟ್ ಸಮಸ್ಯೆ ಸರಿಪಡಿಸಲು ಆಗ್ರಹ
  • ರೈತರು, ಬಿಜೆಪಿ ರೈತ ಮೋರ್ಚಾ ಸದಸ್ಯರಿಂದ ಪ್ರತಿಭಟನೆ
ಶಿರಸಿ: ಬನವಾಸಿ ಭಾಗದಲ್ಲಿ ಯಾವಾಗ ನೋಡಿದರೂ ಕರೆಂಟ್ ಇರಲ್ಲ. ಅಡಿಕೆ ಮರ, ಬಾಳೆ, ಶುಂಠಿ ಬೆಳೆ ಒಣಗುತ್ತಿದ್ದರೂ ಜನಪ್ರತಿನಿಧಿಗಳಿಗೆ ಕಾಣಿಸುತ್ತಲೇ ಇಲ್ಲ. ಹೊಸ ವಿದ್ಯುತ್ ಗ್ರಿಡ್ ನಿರ್ಮಿಸಿ ಐದು ವರ್ಷ ಕಳೆದರೂ ಇದುವರೆಗೂ ಕಾರ್ಯಾರಂಭ ಮಾಡಿಲ್ಲ. ನಮ್ಮ ಗೋಳು ಬಗೆಹರಿಸಿ....
ತಾಲೂಕಿನ ಬನವಾಸಿ ಭಾಗದ ರೈತರು, ಬಿಜೆಪಿ ರೈತ ಮೋರ್ಚಾ ಸದಸ್ಯರು ವಿದ್ಯುತ್ ಸಮಸ್ಯೆಗೆ ಬೇಸತ್ತು ಬನವಾಸಿಯಿಂದ ಬೈಕ್ ರ‌್ಯಾಲಿ ಮೂಲಕ ಆಗಮಿಸಿ ನಗರದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತ ರೈತರನ್ನು ಸಮಾಧಾನಪಡಿಸಿ ಕಳುಹಿಸಲು ಹೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಹೈರಾಣಾದ ಘಟನೆ ಮಂಗಳವಾರ ನಡೆಯಿತು.
ಬೆಳಗ್ಗೆ ಬನವಾಸಿ ಮಧುಕೇಶ್ವರ ದೇವಾಲಯದಿಂದ ಬೈಕ್ ರ‌್ಯಾಲಿ ಮೂಲಕ ಹೊರಟ ನೂರಾರು ಕಾರ್ಯಕರ್ತರು ಬಳಿಕ ನಗರದ ಮಾರಿಕಾಂಬಾ ದೇವಾಲಯದ ಎದುರು ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಕನ್ನಡದ ಮೊದಲ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬನವಾಸಿ ನಿರ್ಲಕ್ಷ್ಯದಲ್ಲಿಯೂ ಮೊದಲ ಸ್ಥಾನದಲ್ಲಿಯೇ ಇದೆ.
ನಾಡಿಗೆ ಅನ್ನ ನೀಡುವ ರೈತ ಇಲ್ಲಿ ನಿತ್ಯ ಕಣ್ಣೀರು ಹಾಕುವ ಸ್ಥಿತಿಯಿದೆ. ಬಿಸಿಲಿನ ಅಬ್ಬರಕ್ಕೆ ಇಲ್ಲಿಯ ಅಡಿಕೆ, ಬಾಳೆ ಮತ್ತು ಶುಂಠಿ ಬೆಳೆಗಳು ಒಣಗುತ್ತಿವೆ. ಇದಕ್ಕೆ ಹೆಸ್ಕಾಂ ಇಲಾಖೆ ಮತ್ತು ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ.
ಬನವಾಸಿಗೆ ಶಿರಸಿ ಗ್ರಿಡ್‌ನಿಂದ ಸದ್ಯ ವಿದ್ಯುತ್ ಪೂರೈಕೆ ಇದೆ. ಆದರೆ, ಇಲ್ಲಿಯ 10 ಸಾವಿರಕ್ಕೂ ಅಧಿಕ ಕುಟುಂಬಗಳ ವಿದ್ಯುತ್ ಬಳಕೆ, ಕೃಷಿ ಪಂಪ್‌ಸೆಟ್‌ಗಳ ಬಳಕೆಗೆ ಈ ವಿದ್ಯುತ್ ಸಾಕಾಗದೇ ವೋಲ್ಟೇಜ್ ಸಮಸ್ಯೆ ಉಂಟಾಗಿದೆ. ನಿತ್ಯ ಬಳಕೆಯ ಯಂತ್ರೋಪಕರಣಗಳು, ಕೃಷಿ ಪಂಪ್‌ಸೆಟ್‌ಗಳು ವಿದ್ಯುತ್ ವ್ಯತ್ಯಯದಿಂದ ಸುಟ್ಟು ಸಾರ್ವಜನಿಕರು ಹಾನಿ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಹೆಸ್ಕಾಂ ಯಾವುದೇ ಕಾಳಜಿ ವಹಿಸಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಮತ್ತು ಸ್ಥಳೀಯ ಶಾಸಕರು ಜನತೆಗೆ ಸುಳ್ಳು ಹೇಳುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಬನವಾಸಿಗೆ ಪ್ರತ್ಯೇಕ ಗ್ರಿಡ್ ಮಂಜೂರಾಗಿ, ಕಾಮಗಾರಿ ಪೂರ್ಣಗೊಂಡು ಐದು ವರ್ಷಗಳು ಕಳೆದಿದ್ದರೂ ಇಂದಿಗೂ ಕಾರ್ಯಾರಂಭ ಮಾಡಿಲ್ಲ.
ಶಾಸಕ ಶಿವರಾಮ ಹೆಬ್ಬಾರ್, ವಿದ್ಯುತ್ ಲೈನ್ ಹಾಕಲು ಕೆಲ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವರ್ಷಗಳಿಂದಲೂ ಹೇಳಿಕೊಂಡು ಬಂದಿದ್ದಾರೆ. ಇಷ್ಟೊಂದು ಸುದೀರ್ಘ ಅವಧಿಯಲ್ಲಿ ಶಿರಸಿ ಗ್ರಿಡ್‌ನಿಂದ ಸಂಪರ್ಕ ಕಲ್ಪಿಸಬಹುದಾಗಿತ್ತು. ಶಾಸಕರು ಸುಳ್ಳು ಹೇಳುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿದ್ಯುತ್ ಪೂರೈಕೆಯ ವ್ಯತ್ಯಯದಿಂದಾಗಿ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡುವಂತೆ ಹಲವಾರು ಬಾರಿ ಮನವಿ ನೀಡಿದರೂ ಹೆಸ್ಕಾಂನಿಂದಾಗಲಿ, ಶಾಸಕರಿಂದಾಗಲಿ ಸ್ಪಂದನೆ ಇಲ್ಲ. ಪ್ರತಿ 10 ನಿಮಿಷಕ್ಕೆ ಕರೆಂಟ್ ಹೋದರೆ ರೈತ ಹೇಗೆ ಬೆಳೆಯಬೇಕು. ರೈತರ ಆತ್ಮ ಹತ್ಯೆ ಜಾಸ್ತಿ ಆದ್ರೂ ಗಮನ ಹರಿಸುತ್ತಿಲ್ಲ. ನಿರಂತರ ಬಿಸಿಲಿನ ಈ ದಿನಗಳಲ್ಲಿ ಬನವಾಸಿ ಭಾಗದಲ್ಲಿ ಅಡಿಕೆ, ಬಾಳೆ, ಶುಂಠಿ ಬೆಳೆಗೆ ನೀರು ಜಾಸ್ತಿ ಬೇಕು. ಶಿರಸಿ ಎಸಳೆ ಗ್ರಿಡ್‌ನಿಂದ ಬದಲಿ ಮಾರ್ಗ ಹಾಕಿ ಒಂದು ತಿಂಗಳ ಒಳಗೆ ಬನವಾಸಿಗೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ಸಹಕಾರಿ ಧುರೀಣ ವಿ.ಎಂ. ಹೆಗಡೆ ಕಬ್ಬೆ ಮಾತನಾಡಿ, ಜಡೆ ಗ್ರಿಡ್‌ನಿಂದ ಬನವಾಸಿ ಗ್ರಿಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಎರಡು ಕಂಬಗಳ ನಿರ್ಮಾಣಕ್ಕೆ ಜಾಗ ಕೊಡಲು ರೈತರು ಒಪ್ಪುತ್ತಿಲ್ಲ ಎಂಬ ಕಾರಣ ಹೇಳಲಾಗುತ್ತಿದೆ.
ಮಾರ್ಗದ ನಕ್ಷೆ ಸಿದ್ಧಪಡಿಸುವಾಗ ರೈತರನ್ನು ವಿಶ್ವಾಸಕ್ಕೆ ಪಡೆದುಕೊಂಡಿರಲಿಲ್ಲವೇ? ರೈತರ ಮಾತು ಇಲಾಖೆ ಅಧಿಕಾರಿಗಳು ಕೇಳುತ್ತಾರಾ? ಉದ್ದೇಶಪೂರ್ವಕವಾಗಿಯೇ ಈ ಮಾರ್ಗ ನಿರ್ಮಾಣಕ್ಕೆ ವಿಳಂಬ ಮಾಡುತ್ತಿದ್ದಾರೇನೋ ಎಂಬ ಸಂಶಯ ಬರುವಂತ ಸ್ಥಿತಿ ನಿರ್ಮಾಣವಾಗಿದೆ. ಒಣಗುತ್ತಿರುವ ಅಡಿಕೆ ಮರ ಉಳಿಸಿಕೊಳ್ಳಲು ರೈತರು ಡೀಸೆಲ್ ಪಂಪ್ ಮೊರೆ ಹೋಗುವಂತಾಗಿದೆ. ಆದರೆ, ಇಂದಿನ ಇಂಧನದ ಬೆಲೆಯಲ್ಲಿ ಡೀಸೆಲ್ ಪಂಪ್ ಮೂಲಕ ಮರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯ ಬನವಾಸಿ ಬ್ಲಾಕ್ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ವಿದ್ಯುತ್ ವ್ಯತ್ಯಯದಿಂದ ಪದೇಪದೆ ಪಂಪ್‌ಸೆಟ್ ಬಂದಾಗುತ್ತಿದೆ. ಇದರಿಂದಾಗಿ ಮನೆಗೂ, ಹೊಲಕ್ಕೂ ತಿರುಗಾಟ ನಡೆಸಿ ಸುಸ್ತಾಗಿದ್ದೇವೆ ಎಂದರು.
ಪ್ರಮುಖರಾದ ಚಂದ್ರಶೇಖರ ಗೌಡ ಕಡಗೋಡ, ಉಷಾ ಹೆಗಡೆ, ಶಂಕರ ಗೌಡ, ಸಂತೋಷ ಗೌಡ, ಶಂಭುಲಿಂಗ ಗೌಡ, ಆನಂದ ಸಾಲೇರ, ನಾಗರಾಜ ನಾಯ್ಕ, ರಮಾಕಾಂತ ಭಟ್ ಇತರರಿದ್ದರು.