R.V.Deshapande 
ಉತ್ತರ ಕನ್ನಡ

ಅಭಿವೃದ್ಧಿ ಕಾಮಗಾರಿಗಾಗಿ ಅನುದಾನ ಮಂಜೂರು grants

ವಿನಯ ಹೆಗಡೆ
ಹಳಿಯಾಳ: ಹಳಿಯಾಳ, ದಾಂಡೇಲಿ, ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ, ವಸತಿ ಶಾಲೆ, ಆರೋಗ್ಯ ಸೇವೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ (Grants) ಮಂಜೂರಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮೂರು ತಾಲೂಕುಗಳಲ್ಲಿನ ಶಾಲೆಗಳಿಗೆ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಒಟ್ಟು 1.88 ಕೋಟಿ ರೂ., ದಾಂಡೇಲಿಯಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ನಿರ್ಮಾಣಕ್ಕೆ 5 ಕೋಟಿ ರೂ. ಮಂಜೂರಿಯಾಗಿದೆ.
ಅಣಶಿಯಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ನಿರ್ಮಾಣಕ್ಕೆ ಕೈಗಾ ಅಣು ವಿದ್ಯುತ್ ನಿಗಮ ಲಿಮಿಟೆಡ್ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ 2.60 ಕೋಟಿ ರೂ. ಮಂಜೂರಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ತಡೆಗಟ್ಟುವ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ 100 ಕೋಟಿ ರೂ.ಅನುದಾನ ಮಂಜೂರಿಯಾಗಿದೆ.
ಇದರಲ್ಲಿ ಜೋಯಿಡಾ ತಾಲೂಕಿಗೆ 21.79 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ, ಹಳಿಯಾಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ (60 ವಿದ್ಯಾರ್ಥಿಗಳು) ಆಟೊಮೇಷನ್ ಮತ್ತು ರೋಬೋಟಿಕ್ಸ್ ಎರಡು ಹೊಸ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲು ಅನುಮೋದನೆ ದೊರೆತಿದೆ ಎಂದು ವಿವರಿಸಿದರು.
ಆರೋಗ್ಯ ಸೇವೆಗಳ ಬಲವರ್ಧನೆಗಾಗಿ, ಆರೋಗ್ಯ ಸೇತು ಯೋಜನೆಯಡಿ ಹಳಿಯಾಳ ಹಾಗೂ ಜೋಯಿಡಾ ತಾಲೂಕುಗಳಲ್ಲಿ ಮೊಬೈಲ್ ವೈದ್ಯಕೀಯ ಘಟಕ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಸಿಎಂ-ಡಿಸಿಎಂ ಮಧ್ಯೆ ಭಿನ್ನಾಭಿಪ್ರಾಯವಿಲ್ಲ

ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ಕುರ್ಚಿ ಕದನ ನಡೆಯುತ್ತಿದೆ ಎಂದು ಅನಾವಶ್ಯಕ ಹಾಗೂ ಆಧಾರ ರಹಿತ ಚರ್ಚೆಗಳು ನಡೆಯುತ್ತಿವೆ.
ಇದನ್ನು ತಾವು ಒಪ್ಪುವುದಿಲ್ಲ. ಇಬ್ಬರಲ್ಲೂ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ದೇಶಪಾಂಡೆ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಹಾಗೂ ಹೈಕಮಾಂಡ್ ವ್ಯವಸ್ಥೆ ಬಲವಾಗಿದೆ.
ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಗಳನ್ನು ಪಕ್ಷದ ಎಲ್ಲ ಮುಖಂಡರು ಶಿಸ್ತಿನಿಂದ ಪಾಲನೆ ಮಾಡುತ್ತಾರೆ. ಆ ಶಿಸ್ತಿನ ಕಾರಣದಿಂದಲೇ ಕಾಂಗ್ರೆಸ್ ರಾಜ್ಯದಲ್ಲಿ ಆರೋಗ್ಯಯುತವಾಗಿ ಬೆಳೆಯುತ್ತಿದೆ ಎಂದರು.