ಗೋಕರ್ಣ ಕ್ಷೇತ್ರಕ್ಕೆ ಗುರುವಾರ ಸಂಜೆ ಆಗಮಿಸಿದ ಶ್ರೀರಾಮ ದಿಗ್ವಿಜಯ ರಥ ಯಾತ್ರೆಯನ್ನು (Rathayatre) ವಿಧ್ಯುಕ್ತವಾಗಿ ಸ್ವಾಗತಿಸಿ ಭವ್ಯ ಮೆರವಣಿಗೆ ಮೂಲಕ ಶ್ರೀಜೀವೋತ್ತಮ ಮಠಕ್ಕೆ ಕರೆತರಲಾಯಿತು
ಗೋಕರ್ಣ: ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದ 550ನೆ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಶ್ರೀ ಬದ್ರಿಕಾಶ್ರಮದಿಂದ ಬಿಜಯಂಗೈದ ಶ್ರೀರಾಮ ದಿಗ್ವಿಜಯ ರಥಯಾತ್ರೆ (Rathayatre) ಗುರುವಾರ ಸಂಜೆ 7 ಗಂಟೆಗೆ ಇಲ್ಲಿಗೆ ಆಗಮಿಸಿತು. ಕ್ಷೇತ್ರದ ರಥಬೀದಿಯ ಮಹಾರಥ ಸನ್ನಿಧಿಯಲ್ಲಿ ಸುಮಂಗಲಿಯರ ಪೂರ್ಣಕುಂಭ ಮತ್ತು ವಿವಿಧ ಮಂಗಳವಾದ್ಯಗಳೊಂದಿಗೆ ವಿದ್ಯುಕ್ತವಾಗಿ ರಥಯಾತ್ರೆಯನ್ನು ಸ್ವಾಗತಿಸಲಾಯಿತು.
ಅಲ್ಲಿಂದ ಮೆರವಣಿಗೆಯಲ್ಲಿ ಹೊರಟ ರಥಯಾತ್ರೆಗೆ ಮನೆ ಮನೆಗಳಲ್ಲಿ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು.
ಮುಖ್ಯ ಮಾರ್ಗದ ಮೂಲಕ ರಥಯಾತ್ರೆಯು ಶ್ರೀಮಠದ ಮೂಲ ತಾಣ ಶ್ರೀಜೀವೋತ್ತಮ ಮಠದ ಶ್ರೀಭೂವಿಜಯರಾಮ ಜಪ ಕೇಂದ್ರಕ್ಕೆ ಆಗಮಿಸಿತು.
ಶ್ರೀಗಳ ಮಹಾಸಂಕಲ್ಪದಂತೆ 550 ಕೋಟಿ ಶ್ರೀರಾಮ ಜಪವನ್ನು ಕಳೆದ 550 ದಿನಗಳಿಂದ ಶ್ರೀಮಠದ ಶಿಷ್ಯಭಕ್ತರಿಂದ ಒಟ್ಟೂ 220 ಆಯ್ದ ಜಪಕೇಂದ್ರಗಳಲ್ಲಿ ಪ್ರತಿ ನಿತ್ಯ ಕೈಗೊಳ್ಳಲಾಗಿದೆ.
ಈ ಕಾರ್ಯಕ್ರಮದಡಿಯಲ್ಲಿ ಸ್ಥಳೀಯ ಶ್ರೀಜೀವೋತ್ತಮ ಮಠದಲ್ಲಿ ಸ್ಥಳೀಯ ಶಿಷ್ಯ ಭಕ್ತರಿಂದ ಏಳೂವರೆ ಕೋಟಿ ಶ್ರೀರಾಮಜಪ ಸಮರ್ಪಣೆ ನಡೆದಿದೆ.
ರಥಯಾತ್ರೆ ಶ್ರೀಮಠಕ್ಕೆ ಆಗಮಿಸಿದ ತರುವಾಯ ಶ್ರೀವೀರವಿಠ್ಠಲ ದೇವರಿಗೆ ಮಹಾಮಂಗಳಾರತಿ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು.
ರಥಯಾತ್ರೆ ಮೆರವಣಿಗೆಗೆ ವಿವಿಧ ಪ್ರಕಾರದ ಬಣ್ಣದ ವೇಷಗಳು ಮತ್ತು ಪುಟ್ಟ ಮಕ್ಕಳ ವಿವಿಧ ದೇವರ ಯಕ್ಷಗಾನ ವೇಷಗಳು ವಿಶೇಷ ಕಳೆಗಟ್ಟಿದವು.
ಕಾರ್ಯಕ್ರಮ ಹಿನ್ನೆಲೆಯಲ್ಲಿ ಶ್ರೀಜೀವೋತ್ತಮ ಮಠವನ್ನು ವಿಶೇಷವಾಗಿ ಶೃಂಗರಿಸಲಾಗಿತ್ತು.
ಗುರುವಾರ ರಾತ್ರಿ ರಥಯಾತ್ರೆ ಶ್ರೀಮಠದಲ್ಲಿ ತಂಗಲಿದ್ದು ಶುಕ್ರವಾರ ಬೆಳಿಗ್ಗೆ ಇಲ್ಲಿಂದ ಮಾದನಗೇರಿಯ ಶ್ರೀಮಹಾಲಸಾ ಸಿದ್ಧಿವಿನಾಯಕ ಮಂದಿರದ ಜಪಕೇಂದ್ರಕ್ಕೆ ಪಯಣಿಸಲಿದೆ.
ಸ್ಥಳೀಯ ಶ್ರೀಮಠ ಸಮಿತಿ ಅಧ್ಯಕ್ಷ ಶ್ರೀಕಾಂತ ಮಾಧವ ಶಾನಭಾಗ, ಉಪಾಧ್ಯಕ್ಷ ವೇ. ಶ್ರೀಧರ ಗೋವಿಂದ ಭಟ್ಟ, ಕಾರ್ಯದರ್ಶಿ ಗಣೇಶ ಬಾಲಕೃಷ್ಣ ಕಾಮತ, ಸದಸ್ಯರಾದ ಗಿರೀಶ ರಾಮದಾಸ ಕಾಮತ, ಹರೀಶ ಕಾಮತ, ಲಕ್ಷ್ಮೀಕಾಂತ ಭಟ್ಟ ಹಾಗೂ ಕ್ಷೇತ್ರದ ಸಮಸ್ತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸದಸ್ಯರು ಕಾರ್ಯಕ್ರಮ ನಿರ್ವಹಿಸಿದರು.