ಗೋಕರ್ಣದ ಪುರಾಣ ಖ್ಯಾತ ಸಾವಿತ್ರಿ ತೀರ್ಥದ ನವ ನಿರ್ಮಾಣಕ್ಕೆ ವೇದವಿದರಿಂದ ವಿಧ್ಯುಕ್ತವಾಗಿ ನಡೆದ ಭೂಮಿ ಪೂಜೆ.
- ಐತಿಹಾಸಿಕ ಸ್ಥಳಗಳಿಗೆ ಶುಕ್ರದೆಸೆ
- ಯಂಗ್‌ಸ್ಟಾರ್ ಕ್ಲಬ್‌ಗೆ 50ನೇ ವರ್ಷದ ಸಂಭ್ರಮ
- ವಿವಿಧ ಸಾಮಾಜಿಕ ಕಾರ್ಯ ಆಯೋಜನೆ
ಗೋಕರ್ಣ: ಯಾತ್ರಾ ಸ್ಥಳ ಗೋಕರ್ಣಕ್ಕೆ ಋಷಿ-ಮುನಿಗಳು, ದೇವಾನುದೇವತೆಗಳು ಮತ್ತು ಜಪ-ತಪ ನಿಷ್ಠ ಮಹಿಮರ ಹೆಸರಿನ ತೀರ್ಥಗಳೇ ಜೀವಾಳ. ಈ ತೀರ್ಥಗಳಿಂದಲೇ ಗೋಕರ್ಣಕ್ಕೆ ತೀರ್ಥಕ್ಷೇತ್ರ ಎಂಬ ಅಭಿದಾನ ಗೌರವ.
ಇಲ್ಲಿ ಯಾವ ತೀರ್ಥದಲ್ಲಿ ಮಿಂದರೆ ಯಾವ ಪುಣ್ಯಫಲ ಪ್ರಾಪ್ತಿ ಮತ್ತು ಎಂತಹ ಪಾಪಗಳ ನಿವೃತ್ತಿ ಎಂಬುದನ್ನು ವಿವಿಧ ಪುರಾಣಗಳು ಉಲ್ಲೇಖಿಸಿವೆ. ಹೀಗಾಗಿ, ಹಿಂದೆಲ್ಲ ಈ ತೀರ್ಥಗಳಲ್ಲಿ ಸ್ನಾನಕ್ಕಾಗಿಯೇ ಯಾತ್ರಿಕರು ಗೋಕರ್ಣಕ್ಕೆ ಬರುವ ಪರಂಪರೆಯಿತ್ತು. ಆ ದಿನಗಳಲ್ಲಿ ಅಂತಹ ಪುರಾಣೋಕ್ತ ತೀರ್ಥಗಳನ್ನು ಮೂಲ ಪಾವಿತ್ರ್ಯದೊಂದಿಗೆ ಸಂರಕ್ಷಿಸಿಕೊಂಡು ಬರಲಾಗಿತ್ತು.
ರಾಜ್ಯದ ಅತ್ಯಂತ ಪುರಾತನ ರಾಜ್ಯಪತ್ರದಲ್ಲಿನ ದಾಖಲೆಯಂತೆ ಗೋಕರ್ಣದ ಸಹ್ಯಾದ್ರಿ ಪರ್ವತ ಶ್ರೇಣಿಯ ಶತಶೃಂಗ ಪರ್ವತದ ಉನ್ನತ ಭೀಮಕುಂಡದ ಸಮತಟ್ಟಿನಿಂದ ಪಶ್ಚಿಮ ಸಮುದ್ರದವರೆಗಿನ ಸುತ್ತಳತೆಯಲ್ಲಿ ಒಟ್ಟು 133ಕ್ಕೆ ಕಡಿಮೆ ಇರದಷ್ಟು ಪೌರಾಣಿಕ ಮಹಾತ್ಮೆಯನ್ನು ವಿಜೃಂಭಿಸುವ ತೀರ್ಥಗಳನ್ನು ದಾಖಲಿಸಲಾಗಿದೆ.
ಆದರೆ, ಕಾಲಾನುಕ್ರಮದಲ್ಲಿ ಅನೇಕ ತೀರ್ಥಗಳ ಭೌತಿಕ ಅಸ್ತಿತ್ವ ಕಥಾವಶೇಷವಾಗಿ ನಾಮಮಾತ್ರ ಉಳಿಯಿತು. ಪ್ರಸಿದ್ಧ ಆತ್ಮಲಿಂಗ ಸನ್ನಿಧಾನದಲ್ಲಿ ಪುಷ್ಕರಣಿಯಾಗಿದ್ದ ಗೋಕರ್ಣ ತೀರ್ಥ ಇಂದು ಬಾವಿಯಾಗಿ ಉಳಿದಿದೆ. ಗೋಶೃಂಗ ಪರ್ವತದಲ್ಲಿ ನದಿಯಾಗಿ ಹುಟ್ಟಿ ಪಾರ್ವತಿ ಮಂದಿರದ ಸಮ್ಮುಖದಲ್ಲಿ ಉತ್ತರಾಭಿಮುಖವಾಗಿ ಹರಿದು ಪಶ್ಚಿಮ ಸಮುದ್ರ ಪ್ರವೇಶಿಸುತ್ತಿದ್ದ ತಾಮ್ರಪರ್ಣಿ ತೀರ್ಥರೂಪ ಹೇಳಹೆಸರಿಲ್ಲದಂತಾಗಿದೆ. ಇನ್ನು ಕಪಿಲತೀರ್ಥದ ಸನಿಹದಲ್ಲಿದ್ದ ಅರಣ್ಯಾತೀರ್ಥ, ಆದಿಗೋಕರ್ಣ ತೀರ್ಥ ಸನಿಹದ ಅಗ್ನಿತೀರ್ಥ, ನದಿರೂಪದಿಂದ ಮಾರ್ಪಾಟಾದ ಮಾಲಿನೀತೀರ್ಥ, ತಾಮ್ರಪರ್ಣಿಗೆ ಹೊಂದಿದ್ದ ಉನ್ಮಜ್ಜನ ತೀರ್ಥ ಇತ್ಯಾದಿ ಹತ್ತು ಹಲವು ತೀರ್ಥಗಳ ಸ್ಫುಟವಾದ ಸ್ಥಳ ಮಾಹಿತಿ ಲಭ್ಯವಿದ್ದರೂ ಇಂದು ಅವುಗಳೆಲ್ಲ ಅದೃಶ್ಯವಾಗಿ ಪುರಾಣಗಳಲ್ಲಿ ಮಾತ್ರ ಉಳಿದಿವೆ!
ಗೋಕರ್ಣದ ಪೌರಾಣಿಕ ಗುರುತು ತಿಳಿಸುವ ‘ಗೋಕರ್ಣ ಪುರಾಣ’ದಲ್ಲಿ ಗೋಕರ್ಣದಲ್ಲಿ ವಿವಿಧ ಮಹಾತ್ಮರುಗಳಿಂದ ಸ್ಥಾಪಿತವಾದ ತೀರ್ಥಗಳ ವಿಸ್ತಾರ ವರ್ಣನೆಗಳಿವೆ. ಬ್ರಿಟಿಷ್ ಆಡಳಿತದಲ್ಲಿ ಈ ತೀರ್ಥಗಳ ಸ್ಥಿತಿಗತಿಗಳನ್ನು ಶಾಸನದಂತೆ ಬರೆದಿಟ್ಟ ಮಹಾ ಭಂಡಾರ ಇವತ್ತಿಗೂ ಮದ್ರಾಸ್ ಪ್ರಾಚ್ಯ ಸಂಗ್ರಹಾಲಯಗಳಲ್ಲಿ ಲಭ್ಯವಿದೆ. ಅವೇ ಗೋಕರ್ಣದ ಕೈಫಿಯತ್ತುಗಳು!
ಬ್ರಿಟಿಷ್ ಆಡಳಿತದಿಂದ 19ನೇ ಶತಮಾನದ ಪ್ರಾರಂಭಿಕ ಭಾಗ 1805ರ ಸುಮಾರಿಗೆ ಸಮಗ್ರ ಭಾರತದ ಭೂ ಪರಿವೀಕ್ಷಣೆಗಾಗಿ ನೇಮಿತನಾದ ಕರ್ನಲ್ ಮೆಕೆಂಜಿ ಎಂಬ ಆಂಗ್ಲ ಅಧಿಕಾರಿ ತನ್ನ ಭಾರತ ಪರ್ಯಟನೆ ವೇಳೆ ಗೋಕರ್ಣಕ್ಕೂ ಆಗಮಿಸಿದ್ದ.
ಆತನ ಲೇಖನಿಯಿಂದ ಹೊರ ಬಂದ ’ಗೋಕರ್ಣ ಕೈಫಿಯತ್ತು’ ಗೋಕರ್ಣದ ಪರಶುರಾಮ ಸೃಷ್ಟಿ, ಸಗರ ಚಕ್ರವರ್ತಿಯ ಅಶ್ವಮೇಧಕ್ಕೂ ಗೋಕರ್ಣಕ್ಕೂ ಇರುವ ಸಂಬಂಧ, ಗೋಕರ್ಣ ತಪಸ್ಸಿಗೆ ಯೋಗ್ಯವಾದ ಬಗೆಗಳು ಇನ್ನಿತರ ಎಲ್ಲ ಪೌರಾಣಿಕ ವಿವರಗಳನ್ನು ಒಳಗೊಂಡಿದೆ.
ಈ ಕೈಫಿಯತ್ತಿನಲ್ಲಿ ಬಹು ಪ್ರಮುಖವಾಗಿ ಮೆಕೆಂಜಿ ಇಲ್ಲಿನ ಪೌರಾಣಿಕ ತೀರ್ಥಗಳನ್ನು ಉಲ್ಲೇಖಿಸಿ ಅವುಗಳ ಸ್ಥಳ ನಿರ್ದೇಶನ ಮತ್ತು ಅಂದಿನ ಅವುಗಳ ಭೌತಿಕ ಅಸ್ತಿತ್ವವನ್ನು ಕರಾರುವಾಕ್ಕಾಗಿ ಪ್ರಸ್ತುತ ಪಡಿಸಿರುವುದು ಮಹತ್ವದ್ದಾಗಿದೆ. 133 ತೀರ್ಥಗಳ ಪೈಕಿ 33 ಕೋಟಿ ದೇವಾನುದೇವತೆಗಳ ಪ್ರಾತಿನಿಧಿಕ ರೂಪವಾಗಿ ಸ್ವೀಕೃತವಾದ 33 ತೀರ್ಥಗಳನ್ನು ‘ನಾಯಕ ತೀರ್ಥಗಳು’ ಎಂಬ ಅಭಿನಾಮ ಪಡೆದಿರುವುದನ್ನು ಕೈಫಿಯತ್ತಿನಲ್ಲಿ ಆತ ಉಲ್ಲೇಖಿಸಿದ್ದಾನೆ.
ಯಂಗ್‌ಸ್ಟಾರ್ ಕ್ಲಬ್‌ನಿಂದ ತೀರ್ಥೋದ್ಧಾರ
ಇಂತಹ ನಾಯಕ ತೀರ್ಥಗಳ ಪೈಕಿ ಅನೇಕ ತೀರ್ಥಗಳು ಇಲ್ಲವಾಗಿವೆ. ಹಲವು ತೀರ್ಥಗಳು ಜೀರ್ಣೋದ್ಧಾರಕ್ಕೆ ಕಾದಿವೆ. ಕ್ಷೇತ್ರದಲ್ಲಿರುವ ಇಂತಹ ತೀರ್ಥಗಳ ಬಗ್ಗೆ ಮೊದಲ ಬಾರಿಗೆ ಗಮನ ಹರಿಸಿದ ಇಲ್ಲಿನ ಯಂಗ್ ಸ್ಟಾರ್ ಕ್ಲಬ್ ಕಳೆದ ವರ್ಷ ಹೂಳು ತುಂಬಿದ್ದ ಗಾಯತ್ರಿ ತೀರ್ಥವನ್ನು ಸ್ವಚ್ಛಗೊಳಿಸಿ ಪುನರಪಿ ತೀರ್ಥೋದ್ಭವಕ್ಕೆ ಕಾರಣವಾಗಿದೆ. ಈಗ ಕ್ಲಬ್‌ನ 50ನೇ ವರ್ಷದ ಆಚರಣೆ ವೇಳೆ ಇಂತಹದೇ ಪೌರಾಣಿಕ ಪಾವಿತ್ರ್ಯದ ಸಾವಿತ್ರಿ ತೀರ್ಥದ ಹೂಳೆತ್ತುವ ಕಾರ್ಯಕ್ಕೆ ಇತ್ತೀಚೆಗೆ ಭೂಮಿ ಪೂಜೆ ಕೈಗೊಳ್ಳಲಾಗಿದೆ.
ಸಾವಿತ್ರಿ ತೀರ್ಥದ ನವೀಕರಣಕ್ಕೆ ಶ್ರೀಮಹಾಬಲೇಶ್ವರ ಮಂದಿರದ ಮುಖ್ಯ ಅರ್ಚಕ ಮತ್ತು ಬ್ರಾಹ್ಮಣ ಪರಿಷತ್ ಅಧ್ಯಕ್ಷ ವೇ. ಚಂದ್ರಶೇಖರ ಅಡಿ ವಿಧ್ಯುಕ್ತ ಪೂಜೆ ನೆರವೇರಿಸಿದ್ದಾರೆ.
ಕಳೆದ ಐದು ದಶಕಗಳಿಂದ ಸಾರ್ವಜನಿಕ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತ ಬಂದ ಕ್ಲಬ್ ಇತ್ತೀಚಿನ ವರ್ಷಗಳಲ್ಲಿ ಗಾಯತ್ರಿತೀರ್ಥ, ಭೀಮ ಕುಂಡದಲ್ಲಿನ ಜನಾರ್ದನ ಮಂದಿರ ಪುನರವತರಣ ಸೇರಿ ಕ್ಷೇತ್ರದ ಪೌರಾಣಿಕ ಸ್ಥಳಗಳ ಅಭಿವೃದ್ಧಿಗೆ ಅಣಿಯಾಗಿದೆ.
"
ಯಂಗ್ ಸ್ಟಾರ್ ಕ್ಲಬ್‌ನ ಸುವರ್ಣ ಮಹೋತ್ಸವ ನಿಮಿತ್ತ ಪೌರಾಣಿಕ ತೀರ್ಥದ ಅಭಿವೃದ್ಧಿಗೆ ಶ್ರೀಕಾರ ಹಾಕಲಾಗಿದೆ. ಪೌರಾಣಿಕ ಸನ್ನಿಧಿಗಳ ನವೀಕರಣಕ್ಕೆ ವೇ. ಚಂದ್ರಶೇಖರ ಅಡಿ ಅವರು 1 ಲಕ್ಷ ರೂ. ಪ್ರಥಮ ಕಾಣಿಕೆ ನೀಡಿ ನಮ್ಮನ್ನು ಪ್ರೇರೇಪಿಸಿದ್ದಾರೆ. ಕ್ಲಬ್‌ನ ಸರ್ವ ಸದಸ್ಯರು, ಕ್ಷೇತ್ರ ವಾಸಿಗಳು ಮತ್ತು ದಾನಿಗಳ ಉತ್ತೇಜನದಿಂದ ಗೋಕರ್ಣದ ಎಲ್ಲ ಪೌರಾಣಿಕ ತಾಣಗಳನ್ನು ಅಭಿವೃದ್ಧಿಪಡಿಸುತ್ತೇವೆ. ನಾಗಕುಮಾರ ಗೋಪಿಯಂಗ್‌ಸ್ಟಾರ್ ಕ್ಲಬ್ ಹಿರಿಯ ಸದಸ್ಯ ಗೋಕರ್ಣ