ಗೋಕರ್ಣದ ಅಶೋಕೆಯ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ವ್ರತನಿಷ್ಠರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಂದ ದಿನಪ್ರಧಾನರಾಗಿ ಉಪಸ್ಥಿತರಿದ್ದ ಕ್ಷೇತ್ರದ ಉಪಾಧಿವಂತ ಪ್ರಮುಖ ವೇ. ಪರಮೇಶ್ವರ ಮಾರ್ಕಾಂಡೆ ದಂಪತಿ ಆಶೀರ್ವಾದ ಪಡೆದರು. 
ಉತ್ತರ ಕನ್ನಡ

ದೇವಲೋಕದ ಅಮೃತ ಭೂಲೋಕದಲ್ಲೂ ಇದೆ! annabrahma

ಪ್ರಮುಖ ಮುಖ್ಯಾಂಶಗಳು

  • ರಾಘವೇಶ್ವರ ಶ್ರೀಗಳಿಂದ ಪರಿಶುದ್ಧ ಐಂದ್ರಜಲ ಪ್ರಸ್ತಾಪ
ಗೋಕರ್ಣ: ಅಮೃತ ದೇವಲೋಕದಲ್ಲಿ ಮಾತ್ರ ಎಂಬ ಭ್ರಮೆ ಸಾರ್ವಜನಿಕವಾಗಿದೆ. ಆದರೆ, ದೇವಲೋಕದ ಅಮೃತ ಭೂಲೋಕದಲ್ಲೂ ಇದೆ.ನಾವು ಅದನ್ನು ಸಂಗ್ರಹಿಸುವ, ಬಳಸುವ ಅವಕಾಶವಿದ್ದರೂ ಮಾಡುತ್ತಿಲ್ಲ. ಮತಿಗೇಡಿಗಳಾದ ಮಾನವರು ಆ ಅಮೃತ ದೇವಲೋಕದಿಂದ ಸುರಿಸಲ್ಪಟ್ಟರೂ ಅದನ್ನು ಗುರುತಿಸದೆ, ಗಮನಿಸದೆ ಅದನ್ನು ಚರಂಡಿಗೆ ಹೋಗಗೊಡುತ್ತಿದ್ದೇವೆ. ಭೋಲೋಕದಲ್ಲೂ ಅಮೃತ ಸುರಿಯುತ್ತಿದ್ದರೂ ನಾವು ಅದರಿಂದ ವಂಚಿತರಾಗಿದ್ದೇವೆ ಎಂದು 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ವ್ರತನಿಷ್ಠರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಇಲ್ಲಿನ ಅಶೋಕೆಯ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಶ್ರೀಗಳು ಅಮೃತ ತುಲ್ಯವಾದ ಪರಮ ಪರಿಶುದ್ಧ ಐಂದ್ರಜಲ ಕುರಿತು ವರ್ಣಿಸಿದರು.
ಏಕಾಂತತಃ ಪಥ್ಯತಮಮ್: ಪ್ರಾಚೀನ ಆಯುವೇದಜ್ಞರು ನೀರನ್ನು ದ್ವಿವಿಧದಲ್ಲಿ ಗುರುತಿಸಿದ್ದಾರೆ. ಆಕಾಶದಿಂದ ಬರುವ ನೆಲ ಮುಟ್ಟದ ನೀರು ಅಥವಾ ಆಂತರಿಕ್ಷ ಜಲ ಮೊದಲನೆಯದು. ಎರಡನೆಯದು ಭೌಮಜಲ ಅದೇ, ನೆಲವನ್ನು ಸೇರಿದ ಭೂಮಿಯ ನೀರು. ಸೂರ್ಯ, ಸೋಮ ಮತ್ತು ವಾಯು ಸಂಪರ್ಕ ಮತ್ತು ಸಂಸರ್ಗದಿಂದ ಪರಿಶುದ್ಧವಾದ ಈ ನೀರನ್ನು ‘ದೇವೋ ವರ್ಷತಿ’ ಅರ್ಥಾತ್ ದೇವತೆಗಳೆ ಸುರಿಸುತ್ತಾರೆ ಎಂಬ ಪ್ರತೀತಿ. ಇಂತಹ ಆಂತರಿಕ್ಷ ಜಲವನ್ನು ಐಂದ್ರಜಲ ಮತ್ತು ಹಂಸೋದಕ ಎಂಬುದಾಗಿಯೂ ಕರೆಯಲಾಗಿದೆ. ಪ್ರಾಚೀನ ಭಾರತದಲ್ಲಿನ ರಾಜರುಗಳು ಈ ಐಂದ್ರಜಲವನ್ನು ಸಂಗ್ರಹಿಸಿಟ್ಟು ವರ್ಷಪೂರ್ತಿ ಅದನ್ನು ಮಾತ್ರ ಆಹಾರವಾಗಿ ಬಳಸುತ್ತಿದ್ದರು. ಇದರಿಂದಾಗಿ ಐಂದ್ರಜಲಕ್ಕೆ ‘ರಾಜಪೇಯ’ ಎಂಬ ಘನತೆಯಿದೆ. ಆಯುರ್ವೇದ ಪರಮಾಚಾರ್ಯರಾದ ಸುಶ್ರೂತರು ಆಂತರಿಕ್ಷ ಜಲವನ್ನು ‘ಏಕಾಂತತಃ ಪಥ್ಯತಮಮ್ ಅಂದರೆ ಎಲ್ಲರಿಗೂ ಸೇವನಾ ಯೋಗ್ಯವಾಗಿ ಈ ದೇವಜಲ ಪಥ್ಯಗಳಲ್ಲಿಯೇ ಶ್ರೇಷ್ಠವಾದುದು ಎಂದಿದ್ದಾರೆ. ಆದರೆ, ಆಧುನಿಕ ಎನ್ನಲಾಗುವ ಈ ಕಾಲದಲ್ಲಿ ಆಂತರಿಕ್ಷಜಲ ಯಾವಾಗ ಸುರಿಸಲ್ಪಡುತ್ತದೆ, ಅದನ್ನು ಸಂಗ್ರಹಿಸಿಡುವ ವಿಧಾನ ಮತ್ತು ಪಾತ್ರತ್ವ ಇತ್ಯಾದಿಗಳನ್ನು ಅರಿಯುವ ಆಸ್ಥೆ ಮತ್ತು  ಆಸಕ್ತಿ ಶೂನ್ಯ ಎಂದು ತಿಳಿಸಿದ ಶ್ರೀಗಳು ಐಂದ್ರಜಲದ ಗುಣ ವೈವಿಧ್ಯವನ್ನು ವಿವರಿಸಿದರು.
ಷಟ್ ಗುಣ ಭರಿತ ಐಂದ್ರಜಲ: ಆಯುರ್ವೇದ ಶಾಸ್ತ್ರಜ್ಞರಾದ ಚಕ್ರಪಾಣಿದತ್ತರು ‘ದಿವ್ಯ ಜಲಸ್ಯ ಪ್ರಾಕೃತ ಗುಣಮಹಾ’ ಎಂದಿದ್ದಾರೆ.ಪ್ರಕೃತಿಗೆ ಗೊತ್ತಾಗುವಂತಹ ಆರು ಗುಣಗಳು ಐಂದ್ರಜಲ ಅಥವಾ ಆಂತರಿಕ್ಷ ಜಲದಲ್ಲಿದೆ. ಇದಕ್ಕೆ ಸಮವಾದ ಶುಚಿಯಾದ ನೀರು ಸೃಷ್ಟಿಯಲ್ಲಿಲ್ಲ. ಭೂಮಿಯ ಮೇಲಿನ ಇನ್ನಾವುದೇ ನೀರನ್ನು ಸರ್ವಥಾ ಸೇವಿಸಿದ, ಕವಿ ಸಮಯಕ್ಕೆ ಉಲ್ಲೇಖಿತವಾಗುವ ಚಾತಕ ಪಕ್ಷಿ ಈ ನೀರನ್ನು ಕುಡಿಯುವುದಕ್ಕಾಗಿ ಕಾಯುತ್ತಿರುತ್ತದೆ. ಶೀತ ಅಂದರೆ ತಂಪು, ಶುಚಿ-ಶುದ್ಧ, ಶಿವಂ ಅಂದರೆ ಶುಭಕಾರಕ, ಮೃಷ್ಟಂ ಅರ್ಥಾತ್ ವದನಪ್ರಿಯವಾದ ಅತಿ ರುಚಿಕರ, ವಿಮಲಂ ಅಂದರೆ ದೋಷ ರಹಿತ ಮತ್ತು ಜೀರ್ಣಸಲು ಯೋಗ್ಯವಾದ ಲಘು ಇವುಗಳು ಆಂತರಿಕ್ಷ ಜಲದ ಷಟ್ ಗುಣಗಳಾಗಿವೆ. ಆಂತರಿಕ್ಷ ಜಲ ಸುರಿದು ಭೂಮಿಯನ್ನು ಸೇರಿದ ಮೇಲೆ ಶ್ವೇತ, ಪಾಂಡರ, ಕಪಿಲ, ಉಷಿರೆ ಇತ್ಯಾದಿ ಆ ಆ ಭೂಮಿಗೆ ಅನುಗುಣವಾಗಿ ಕಷಾಯ, ಕಹಿ, ಕ್ಷಾರ, ಖಾರ, ಲವಣ ಮುಂತಾದ ಗುಣಗಳನ್ನು ಹೊಂದುತ್ತದೆ.
ಚತುರ್ವಿಧ ಆಂತರಿಕ್ಷ ಜಲ: ‘ದಿವ್ಯಂ ಚತುರ್ವಿಧ ಪ್ರೊಕ್ತಮ್’. ಅತ್ಯಂತ ಪವಿತ್ರವಾದ ಆಂತರಿಕ್ಷ ಜಲದಲ್ಲಿ ಧಾರಂ, ಕಾರಂ, ತೌಷಾರಂ ಮತ್ತು ಹೈಮಂ ಎಂಬ ನಾಲ್ಕು ವಿಧಗಳಿವೆ. ಆಂತರಿಕ್ಷ ಜಲದಲ್ಲಿ ಮೊದಲನೆಯದಾದ ಧಾರಂ ಗಾಂಗಾ ಮತ್ತು ಸಾಮುದ್ರ ಎಂಬ ದ್ವಿವಿಧವಾಗಿದೆ. ಮೋಡದಿಂದ ಹೊರಡುವಾಗ ಎಲ್ಲವೂ ಶುದ್ಧ ಜಲರೂಪಿಯಾದ ಗಾಂಗಾ. ಭೂಮಿಗೆ ಬರುತ್ತಿರುವುವಂತೆ ದೇವ ವರ್ಷಿತ ಐಂದ್ರಜಲ ಕೂಡ ವಿಷಕಾರಕವಾದ ಸಾಮುದ್ರ ಜಲರೂಪ ತಳೆಯುವುದು. ಕಾರಣ ಆಕಾಶದಿಂದ ಸುರಿವ ನೀರನ್ನು ಪರೀಕ್ಷಿಸಿ ಸೇವಿಸಬೇಕು. ಪರೀಕ್ಷಿಸುವ ಹಾಗೂ ಪ್ರಯೋಗಿಸುವ ವಿಧಾನ ಶೂನ್ಯತೆಯಿಂದಾಗಿ ಇಂದು ವಿಷ ಮಾನವರಾಗಿದ್ದೇವೆ. ನಾವು ನಮ್ಮ ಪ್ರಾಚೀನರಂತೆ ಮತ್ತೆ ಅಮೃತ ಮಾನವರಾಗಿ ಅಂದಿನ ಆ ಪರಂಪರೆಯನ್ನು ಉಜ್ಜೀವನ ಮಾಡಬೇಕು. ಕಾರಣ ಇದಕ್ಕೆ ಆಯುರ್ವೇದ ಶಾಸ್ತ್ರದ ಪೂರ್ವಸೂರಿಗಳಾದ ಆಚಾರ್ಯ ಸುಶ್ರೂತ, ಚರಕ ಮಹರ್ಷಿ, ಋಷಿ ಹಾರೀತರು ಇತ್ಯಾದಿ ಮಹನೀಯರು ಏಕತ್ರವಾಗಿ ತೋರಿದ ದಾರಿದೀಪದ ಬೆಳಕನ್ನು ಅವಲಂಬಿಸಿ ಅನುಕರಿಸುವಂತಾಗಲಿ ಎಂದು ಶ್ರೀಗಳು ಆಶೀರ್ವಚನ ಅನುಗ್ರಹಿಸಿದರು.
ಧರ್ಮಸಭೆಯಲ್ಲಿ ಇಲ್ಲಿನ ಉಪಾಧಿವಂತ ಪ್ರಮುಖ ವೇ. ಪರಮೇಶ್ವರ ಮಾರ್ಕಾಂಡೆ ದಂಪತಿ ದಿನಪ್ರಧಾನರಾಗಿ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.