ದಂಡಿನದುರ್ಗಾ(Durgadevi) ದೇವಸ್ಥಾನದ 25ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ.
ಭಟ್ಕಳ:ಮಾನವನ ಅತಿಆಲಸ್ಯದಿಂದಾಗಿ ರಾಜಾಶ್ರಯದಲ್ಲಿದ್ದ ದೇವಿ (Durgadevi) ಇಂದು ಸಣ್ಣ ಗುಡಿಗಳಲ್ಲಿ ನೆಲೆಸುವಂತಾಗಿದೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ದಂಡಿನದುರ್ಗಾ ದೇವಸ್ಥಾನದ 25ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ಬುಧವಾರ ಶ್ರೀ ದೇವಿಗೆ ರಜತ ಕವಚ ಸಮರ್ಪಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಭಾರತ ಭೂಮಿ ಪುಣ್ಯಭೂಮಿಯಾಗಿರುವುದು ಇಂತಹ ಆರಾಧನೆ, ಆಚರಣೆ ಹಾಗೂ ಆಚಾರ್ಯರು ನೀಡಿದ ತತ್ವಗಳಿಂದಲೇ ಎಂದರು.
ಮಡಿಲಲ್ಲಿ ಮಗುವನ್ನಿಟ್ಟುಕೊಂಡು ಜಗತ್ತಿಗೆ ದಾರಿ ತೋರಿಸುವ ತಾಯಿಯೇ ಶ್ರೇಷ್ಠಳಾಗಿರುವಂತೆ, ಜಗಜ್ಜನನಿಯಾದ ದುರ್ಗಾದೇವಿ ಸಕಲ ಚರಾಚರಗಳ ರಕ್ಷಕಿಯಾಗಿದ್ದಾಳೆ.
ದೇವಿಯನ್ನು ಸಪ್ತಶತಿಯಲ್ಲಿ ಮಾರ್ಕಾಂಡೇಯರು ವರ್ಣಿಸಿರುವುದು, ರಕ್ತಬೀಜಾಸುರ, ಚಂಡ-ಮುಂಡ ವಧೆಯ ಪೌರಾಣಿಕ ಕಥೆಗಳು ಇಲ್ಲಿನ ದೇವಾಲಯದ ಮಹತ್ವವನ್ನು ಪ್ರತಿಪಾದಿಸುತ್ತವೆ ಎಂದರು.
ಮಹಾಮಂಡಲೇಶ್ವರಿ ರಾಣಿ ಚೆನ್ನಾಭೈರಾದೇವಿ ಕೇವಲ ಭಟ್ಕಳಕ್ಕೆ ಮಾತ್ರ ಸೀಮಿತವಾಗದೆ, ಸಂಪೂರ್ಣ ಕರಾವಳಿಗೆ ಎಚ್ಚರಿಕೆಯ ಸಂದೇಶ ನೀಡಿದ ಮಹಾನ್ ಶಕ್ತಿಯಾಗಿದ್ದಳು.
ಸಂಕಷ್ಟದ ಸಂದರ್ಭಗಳಲ್ಲಿ ಚೆನ್ನಾಭೈರಾದೇವಿಯನ್ನು ಈ ದೇವಿಯೇ ರಕ್ಷಿಸಿದಳು ಎನ್ನುವ ಐತಿಹ್ಯವೂ ಇದೆ. ದುರ್ಗಾದೇವಿ ಕೇವಲ ದೇಶದ ಕೋಟೆಗಳ ರಕ್ಷಕಿಯಷ್ಟೇ ಅಲ್ಲ, ಭವದ ಕೋಟೆಯ ರಕ್ಷಕಿಯೂ ಹೌದು ಎಂದರು.
ಉತ್ಸವದ ಆರಂಭದಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಿ ಭಕ್ತರು ಬರಮಾಡಿಕೊಂಡರು.
ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ರಜತ ಕವಚದೊಂದಿಗೆ ಶೋಭಾಯಾತ್ರೆ ನಡೆಯಿತು. ಸರ್ಕಲ್ ಮುಖಾಂತರ ದಂಡಿನದುರ್ಗಾ ದೇವಸ್ಥಾನ ತಲುಪಿದ ಈ ಮೆರವಣಿಗೆಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡರು.
ಉತ್ಸವದ ಅವಧಿಯಲ್ಲಿ 3 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಿದರು. ಮಂಜುಸುತ ಜಲವಳ್ಳಿ ರಚಿಸಿದ ನಡೆಸು ನಮ್ಮನು ದಂಡಿನ ದುರ್ಗ ದೇವಿಯೆ ಎಂಬ ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ಕಳೆದ 25 ವರ್ಷಗಳಿಂದ ದೇವಾಲಯದಲ್ಲಿ ಸೇವೆ ಸಲ್ಲಿಸಿದ ಅರ್ಚಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, 1993ರ ಗಲಾಟೆ ಸಂದರ್ಭದಲ್ಲಿ ಬಲಿದಾನವಾದವರ ಕುಟುಂಬಗಳಿಗೆ ಸ್ಮರಣಿಕೆಗಳನ್ನು ವಿತರಿಸಲಾಗುವುದು ಎಂದು ತಿಳಿಸಲಾಯಿತು.
ಮಹಾಮಂಡಲೇಶ್ವರಿ ಶ್ರೀರಾಣಿ ಚೆನ್ನಾಭೈರಾದೇವಿಯವರಿಂದ ವೇದಿಕೆ ಉದ್ಘಾಟನೆಯನ್ನು ಶ್ರೀಗಳು ನೆರವೇರಿಸಿದರು.
ರತ್ನಾಕರ, ಅರ್ಚಕ ರಾಜೇಶ ಭಟ್, ಗಣಪತಿ ಹೆಗಡೆ, ಶ್ರೀಧರ ಹೆಬ್ಬಾರ, ಮಂಜುಸುತ ಜಲವಳ್ಳಿ, ದಾನಿ ಮಾದೇವ ನಾಯ್ಕ, ದೀಪಕ ಶಿರಾಲಿಕರ, ನೇತ್ರಾ ಗಣಪತಿ, ಹರಿ ಅಣ್ಣಪ್ಪ ಪಾವಸ್ಕರ, ರಮಾನಂದ ಆಚಾರ್ಯ ಬಸ್ರೂರು ಇತರರಿದ್ದರು.
ದುರ್ಗಾದಾಸ ನಾಯ್ಕ ಪ್ರಾರ್ಥನೆ ಸಲ್ಲಿಸಿದರು. ಶಿಕ್ಷಕ ನಾರಾಯಣ ನಾಯ್ಕ ಹಾಗೂ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಪಾವಸ್ಕರ ವಂದಿಸಿದರು.