ಹೊನ್ನಾವರದಲ್ಲಿ ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಮಾತನಾಡಿದರು. ಶಂಕರ ಗೌಡ ಇದ್ದರು.
ಹೊನ್ನಾವರ: ಜಿಲ್ಲೆಯ ಗ್ರಾಮೀಣ ಪ್ರದೇಶದ ತುಂಡು ಭೂಮಿಯಲ್ಲಿ ಜನಸಾಮಾನ್ಯರು ಮನೆ ಕಟ್ಟಿಕೊಳ್ಳಲು ತೊಡಕಾಗಿರುವ ಎನ್‌ಎ ಮತ್ತು ಇ-ಸ್ವತ್ತು ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾ ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಜಿಲ್ಲೆ ಭೌಗೋಳಿಕವಾಗಿ ಭಿನ್ನವಾಗಿದ್ದು, ಸಾಕಷ್ಟು ಹಳ್ಳಿಗಳು ರಸ್ತೆಯನ್ನೇ ಕಂಡಿಲ್ಲ. ರಸ್ತೆಗಳಿದ್ದರೂ ಬಡವರು, ಜನಸಾಮಾನ್ಯರ ತುಂಡು ಭೂಮಿಗೆ ಹೊಂದಿಕೊಂಡಿರುವುದಿಲ್ಲ. ಹೀಗಿರುವಾಗ ಜನಸಾಮಾನ್ಯರ ಪಾಲಿಗೆ ಎನ್‌ಎ ಮತ್ತು ಇ-ಸ್ವತ್ತು ಬಿಡಿಸಲಾಗದ ಕಗ್ಗಂಟಾಗಿದೆ. ಸರ್ಕಾರದ ಇನ್ನಿತರ ವಸತಿ ಯೋಜನೆಯಡಿ ಮನೆ ಮಂಜೂರಾತಿ ಪಡೆದುಕೊಂಡರೆ ಎನ್‌ಎ ಮತ್ತು ಇ-ಸ್ವತ್ತಿನ ಸಮಸ್ಯೆಗಳೇ ಇಲ್ಲ. ಈ ಮನೆಗಳಿಗೆ ಗ್ರಾಮ ಪಂಚಾಯಿತಿಯಿಂದ ಮನೆ ನಂಬರ್ ನೀಡಿ, ಕರ ನಿರ್ಧರಿಸಲಾಗುತ್ತದೆ. ಆದರೆ, ಕಳೆದ 7-8 ವರ್ಷಗಳಿಂದ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಆಶ್ರಯ ಯೋಜನೆಯಡಿ ಮನೆಗಳಿಗೆ ಮಂಜೂರಾತಿ ನೀಡಿಲ್ಲ. ಜಿಲ್ಲೆಯ ಪರಿಸ್ಥಿತಿ ಅರಿತು ಬಡವರು ಹಾಗೂ ಜನಸಾಮಾನ್ಯರಿಗೆ ಗ್ರಾಮೀಣ ಪ್ರದೇಶದಲ್ಲಿ ಮನೆಕಟ್ಟಿಸಿಕೊಳ್ಳಲು ತೊಡಕಾಗಿರುವ ಎನ್.ಎ ಮತ್ತು ಇಸ್ವತ್ತುಗಳಿಂದ ವಿನಾಯಿತಿ ನೀಡಬೇಕು ಎಂದು ಸಾರ್ವಜನಿಕವಾಗಿ ಆಗ್ರಹಿಸಿ ಮುಖ್ಯಮಂತ್ರಿ, ವಸತಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ನೀಡಲಾಗುವುದು ಎಂದು ಆಗ್ರಹಿಸಿದರು.
ಸದಸ್ಯ ಶಂಕರ ಗೌಡ ಗುಣವಂತೆ ಮಾತನಾಡಿ, ನಮ್ಮ ಜಿಲ್ಲೆಯ ರೈತರು ಸೌಲಭ್ಯ ಪಡೆದುಕೊಂಡಿರುವುದಕ್ಕಿಂತ, ಕಳೆದುಕೊಂಡಿರುವುದೇ ಹೆಚ್ಚು. ಜನಸಾಮಾನ್ಯರಿಗೆ ಸೌಲಭ್ಯ ನೀಡುವುದಕ್ಕಿಂತ ನಂಬಿಸಿ ಕುತ್ತಿಗೆ ಕೊಯ್ಯುವ ಕೆಲಸ ಆಳುವ ಸರ್ಕಾರ ಮಾಡುತ್ತಿದೆ. ಬಡವರು, ತುಂಡು ಭೂಮಿಯುಳ್ಳ ರೈತರು ಮನೆ ನಿರ್ಮಿಸಿಕೊಳ್ಳಲು ತೊಡಕಾಗುವುದರಿಂದ ಈ ಗೊಂದಲಕ್ಕೆ ಮುಕ್ತಿ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಶವ ನಾಯ್ಕ, ನಾರಾಯಣ ಮುಕ್ರಿ, ದೀಪಕ ಲೋಬೋ ಇದ್ದರು.