ಭಟ್ಕಳದ ವಿವೇಕ ಮಹಾಲೆ ಮತ್ತು ನಾಗಸಂಧ್ಯಾ ಶಾಂತಿ ಅವರ ವಿವಾಹ ಮಹೋತ್ಸವದಲ್ಲಿ ವಧು-ವರರಿಗೆ ಗ್ಯಾಸ್ ಸಿಲಿಂಡರ್ ಅನ್ನು ಉಡುಗೊರೆಯಾಗಿ ನೀಡಲಾಯಿತು.
- ಭಟ್ಕಳದಲ್ಲಿ ಗಮನಸೆಳೆದ ಮದುವೆ ಸಮಾರಂಭ
ಭಟ್ಕಳ: ದೇಶದಾದ್ಯಂತ ಎಲ್‌ಪಿಜಿ ಗ್ಯಾಸ್ ಕೊರತೆ ತೀವ್ರವಾಗುತ್ತಿದ್ದು, ಸಾಮಾನ್ಯ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ದಿನ ಬೆಳಗಾದರೆ ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಸಿಲಿಂಡರ್ ಪಡೆಯಲು ಪರದಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಗ್ಯಾಸ್ ಸಿಲಿಂಡರ್ ಕುರಿತ ರೀಲ್ಸ್ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದು, ಜನರ ಅಸಹಾಯಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿವೆ. ಇಂಥದ್ದರಲ್ಲಿ ಪಟ್ಟಣದಲ್ಲಿ ನಡೆದ ಮದುವೆ ಸಮಾರಂಭ ವಿಶೇಷ ಗಮನ ಸೆಳೆದಿದೆ. ಪಟ್ಟಣದ ವಿವೇಕ ಮಹಾಲೆ ಮತ್ತು ನಾಗ ಸಂಧ್ಯಾ ಶಾಂತಿ ಅವರ ವಿವಾಹ ಮಹೋತ್ಸವದಲ್ಲಿ, ವರ ವಧುವಿಗೆ ಗ್ಯಾಸ್ ಸಿಲಿಂಡರ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಗ್ಯಾಸ್ ಸಿಲಿಂಡರ್ ಅಪರೂಪದ ವಸ್ತುವಾಗಿರುವ ಹಿನ್ನೆಲೆಯಲ್ಲಿ ಈ ಉಡುಗೊರೆ ವಿಶೇಷ ಅರ್ಥ ಪಡೆದುಕೊಂಡಿದೆ. ಈ ಸನ್ನಿವೇಶ ಸ್ಥಳೀಯರ ಗಮನ ಸೆಳೆದಿದೆ. ಸಾಮಾನ್ಯವಾಗಿ ಮನೆ ಉಪಯೋಗಕ್ಕೆ ಅಗತ್ಯವಿರುವ ಗ್ಯಾಸ್ ಸಿಲಿಂಡರ್, ಇಂದಿನ ಪರಿಸ್ಥಿತಿಯಲ್ಲಿ ಮದುವೆ ಉಡುಗೊರೆಯಾಗಿ ನೀಡಲಾಗುತ್ತಿರುವುದು ಕಾಲದ ವೈಶಿಷ್ಟ್ಯವನ್ನೇ ತೋರಿಸುತ್ತದೆ. ಒಟ್ಟಿನಲ್ಲಿ, ಎಲ್‌ಪಿಜಿ ಕೊರತೆಯಿಂದ ಜನಜೀವನದ ಮೇಲೆ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.