ಯಲ್ಲಾಪುರದ ಅಡಕೆ ಭವನದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಗ.ನಾ.ಕೋಮಾರ ಅವರನ್ನು ಅಭಿನಂದನಾ ಸಮಿತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಡಾ. ಶ್ರೀಧರ ಬಳಗಾರ, ಆರ್.ಎನ್.ಹೆಗಡೆ, ಪ್ರಮೋದ ಹೆಗಡೆ, ಹರಿಪ್ರಕಾಶ ಕೋಣೆಮನೆ, ನರಸಿಂಹ ಕೋಮಾರ, ಡಾ.ಅಶೋಕಕುಮಾರ ಇತರರಿದ್ದರು.
ಯಲ್ಲಾಪುರ: ತಾಳ್ಮೆ ಮತ್ತು ವಿನಯದಿಂದಲೇ ಬದುಕನ್ನು ಗೆಲ್ಲುವ ಮೂಲಕ ಗ.ನಾ.ಕೋಮಾರ ಅವರು ಸಮಾಜಕ್ಕೆ ಪಾಠವಾಗಿದ್ದಾರೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಪಟ್ಟಣದ ಅಡಕೆ ಭವನದಲ್ಲಿ ಭಾನುವಾರ ಹಿರಿಯ ಸಾಮಾಜಿಕ ಕಾರ್ಯಕರ್ತ ಗ.ನಾ.ಕೋಮಾರ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಹಿತಿ ಡಾ. ಶ್ರೀಧರ ಬಳಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಗಳಲ್ಲಿ ಮನುಷ್ಯರು ಮನುಷ್ಯರಾಗಿಯೇ ಇರುತ್ತಾರೆ, ನಗರಗಳಲ್ಲಿ ಮನುಷ್ಯರು ಯಂತ್ರಗಳಾಗಿರುತ್ತಾರೆ. ಕೋಮಾರರು ಬೀಗಾರಿನಂತಹ ಗ್ರಾಮವನ್ನೇ ಅಂತಃಕರಣದಲ್ಲಿ ಇಟ್ಟುಕೊಂಡು, ಗ್ರಾಮ ಕಲ್ಪನೆಗೆ ಘನತೆ, ಗೌರವ ತಂದುಕೊಟ್ಟಿರುವುದು ಆದರ್ಶ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯಲ್ಲಾಪುರದ ಸಂಸ್ಕೃತಿ, ಹವ್ಯಕರ ಸಂಸ್ಕಾರಗಳನ್ನು ಮುಂದಿನ ತಲೆಮಾರಿಗೆ ನೀಡುವ ಕಾರಣಕ್ಕಾಗಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಕಷ್ಟ ನಷ್ಟಗಳು ಬಂದರೂ ಎದುರಿಸಿ, ನಿಲ್ಲುವ, ಎಲ್ಲರೊಳಗೆ ಒಂದಾಗುವ ಕೋಮಾರರ ಬದುಕು ಮಾರ್ಗದರ್ಶಿಯಾಗಿದೆ ಎಂದರು.
ಗುಜರಾತ ಪೊಲೀಸ್ ಆಯುಕ್ತ ನರಸಿಂಹ ಕೋಮಾರ ಅಭಿನಂದನಾ ಗ್ರಂಥ ಲೋಕಾಪರ್ಣೆಗೊಳಿಸಿದರು. ಗ.ನಾ. ಕೋಮಾರ ಅವರನ್ನು ಅಭಿನಂದನಾ ಸಮಿತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಹಿರಿಯ ಸಹಕಾರಿ ಆರ್.ಎನ್. ಹೆಗಡೆ ಗೋರ್ಸಗದ್ದೆ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಡಾ.ಡಿ.ಕೆ. ಗಾಂವ್ಕರ ಗ್ರಂಥದ ಅವಲೋಕನ ಮಾಡಿದರು. ನಿವೃತ್ತ ಸಿಸಿಎಫ್ ಡಾ.ಅಶೋಕಕುಮಾರ, ಹಿರಿಯ ಸಹಕಾರಿ ಪಿ.ಜಿ. ಹೆಗಡೆ, ಸರ್ವೋದಯ ಶಿಕ್ಷಣ ಸಮಿತಿ ಅಧ್ಯಕ್ಷ ಡಿ. ಶಂಕರ ಭಟ್ಟ, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಅಭಿನಂದನಾ ಸಮಿತಿ ಉಪಾಧ್ಯಕ್ಷ ಡಿ.ಎನ್. ಗಾಂವ್ಕರ, ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಇತರರಿದ್ದರು.
ಪ್ರಸಾದ ಕೋಮಾರ ಪ್ರಾರ್ಥಿಸಿದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಮುರಳಿ ಹೆಗಡೆ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಸಣ್ಣಪ್ಪ ಭಾಗ್ವತ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹೆಗಡೆ ಸನ್ಮಾನಪತ್ರ ವಾಚಿಸಿದರು. ಡಾ.ರವಿ ಭಟ್ಟ ಬರಗದ್ದೆ ನಿರ್ವಹಿಸಿದರು. ಡಿ.ಎನ್.ಗಾಂವ್ಕರ ವಂದಿಸಿದರು.