Incredible India (ಚಿತ್ರ X)
ನವದೆಹಲಿ: ಭಾರತದ ಪ್ರವಾಸೋದ್ಯಮ ಮತ್ತು ಇಲ್ಲಿನ ಸಂಸ್ಕೃತಿ ವಿದೇಶಿ ಪ್ರವಾಸಿಗರನ್ನು ಯಾವಾಗಲೂ ಆಕರ್ಷಿಸುತ್ತದೆ. 'ಅತಿಥಿ ದೇವೋ ಭವ' ಎಂಬ ತತ್ವಕ್ಕೆ ಸಾಕ್ಷಿ ಎಂಬಂತೆ, ಭಾರತೀಯರ ಸೌಜನ್ಯ ಹಾಗೂ ಅಪರಿಚಿತರಿಗೆ ಸಹಾಯ ಮಾಡುವ ಗುಣವನ್ನು(Incredible India) ವಿದೇಶಿ ಪ್ರವಾಸಿಗರು ಆಗಾಗ್ಗೆ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಇದೀಗ ಅಂತಹದ್ದೇ ಒಂದು ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದೆ.
ಭಾರತದಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿರುವ ಪೈಜ್ ಎಂಬ ವಿದೇಶಿ ಮಹಿಳೆಯೊಬ್ಬರು, ತಾವು ಭಾರತದಲ್ಲಿ ಕಳೆದ ಸುಂದರ ಕ್ಷಣಗಳು ಮತ್ತು ಇಲ್ಲಿನ ಜನರ ಸಹೃದಯತೆಯನ್ನು ಕೊಂಡಾಡಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
ಪೈಜ್ ಅವರು ದೆಹಲಿಗೆ ತಲುಪಿದಾಗ ವಿಮಾನ ತಡರಾತ್ರಿ ಆಗಿತ್ತು. ಈ ವೇಳೆ ಅವರು ತಂಗಬೇಕಿದ್ದ ಹೋಟೆಲ್ಗೆ ಹೋಗಲು ಉಬರ್ ಬುಕ್ ಮಾಡಿದ್ದರು. ಆದರೆ, ಆ ಹೋಟೆಲ್ ತಲುಪುವಷ್ಟರಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಆದಾಗ್ಯೂ, ರಸ್ತೆಯ ಮುಂಭಾಗದಲ್ಲೇ ಬ್ಯಾರಿಕೇಡ್‌ಗಳಿದ್ದ ಕಾರಣ ಕಾರು ನೇರವಾಗಿ ಹೋಟೆಲ್‌ನ ಮುಂಭಾಗಕ್ಕೆ ಹೋಗಲು ಸಾಧ್ಯವಿರಲಿಲ್ಲ. ಆಗ ಚಾಲಕ ಆ ಮಹಿಳೆಯನ್ನು ಹೋಟೆಲ್‌ನ ಅತ್ಯಂತ ಹತ್ತಿರದ ರಸ್ತೆಯವರೆಗೂ ಕರೆದುಕೊಂಡು ಹೋದನು. ನಂತರ ಸುರಕ್ಷಿತ ಜಾಗದಲ್ಲಿ ಕಾರು ನಿಲ್ಲಿಸಿ ವಿದೇಶಿ ಪ್ರಯಾಣಿಕರೊಂದಿಗೆ ಹೆಜ್ಜೆ ಹಾಕುತ್ತಾ ಅವರನ್ನು ಹೋಟೆಲ್ ಒಳಗೆ ಬಿಟ್ಟು ಬಂದಿದ್ದಾರೆ.
ನನಗೆ ಯಾರೋ ಒಬ್ಬ ಪರಿಚಯವೇ ಇಲ್ಲದ ವ್ಯಕ್ತಿ, ಆದರೂ ನಾನು ಸುರಕ್ಷಿತವಾಗಿ ನನ್ನ ಹೋಟೆಲ್ ತಲುಪುವಂತೆ ನೋಡಿಕೊಂಡಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಮತ್ತೊಂದು ಅಚ್ಚರಿಯ ಘಟನೆ ಮೆಡಿಕಲ್ ಸ್ಟೋರ್ನಲ್ಲಿ ನಡೆಯಿತು. ಬಿಲ್ ಪಾವತಿಸುವಾಗ ಕ್ಯಾಷಿಯರ್ ಬಳಿ ಅವರಿಗೆ ಮರಳಿ ಕೊಡಲು ನಿಖರವಾದ ಚಿಲ್ಲರೆ ಹಣ ಇರದ ಕಾರಣ ಅವರಿಗೆ ಉಚಿತ ಹ್ಯಾಂಡ್ ಸ್ಯಾನಿಟೈಸರ್ ನೀಡಿರುವುದಾಗಿ ಹಂಚಿಕೊಂಡಿದ್ದಾರೆ.
ಆದಾಗ್ಯೂ, ನಾನು ದೆಹಲಿಯಲ್ಲಿ ದಾರಿ ತಪ್ಪಿ ಬಂದಾಗ ನನ್ನನ್ನು ಬಸ್ ನಿಲ್ದಾಣಕ್ಕೆ ಕರೆದುಕೊಂಡ ಮಹಿಳೆ, ಮಳೆಯಲ್ಲಿ ಸಿಲುಕಿಕೊಂಡಾಗ ತನ್ನ ಸ್ಕೂಟರ್‌ನಲ್ಲಿ ಹೋಗಲು ಆಫರ್ ನೀಡಿದ ಸ್ಥಳೀಯ ರೆಸ್ಟೋರೆಂಟ್‌ನ ವ್ಯಕ್ತಿಯಾಗಿರಬಹುದು. ವೃದ್ಧ ಮಹಿಳೆಯೊಬ್ಬರು ನೀವು ಟ್ರೈ ಮಾಡ್ಲೇ ಬೇಕು ಅಂತ ನನಗೆ ಒಂದು ಪ್ಲೇಟ್ ಪಕೋಡಾ ಕೂಡಾ ನೀಡಿದ್ದರು. ಇದೆಲ್ಲವೂ ಯಾವುದೇ ಸ್ವಾರ್ಥವಿಲ್ಲದೆ, ಕೇವಲ ತಮ್ಮ ದೇಶಕ್ಕೆ ಬಂದ ಅತಿಥಿ ಹಸಿದಿರಬಾರದು ಮತ್ತು ಸುರಕ್ಷಿತವಾಗಿರಬೇಕು ಎಂದು ಬಯಸುವ ಇಂತಹ ಸಣ್ಣ ಸಣ್ಣ ಮನಸ್ಸುಗಳೇ ಭಾರತವನ್ನು ಜಗತ್ತಿನಲ್ಲೇ "ಅತ್ಯಂತ ಆತಿಥ್ಯಕಾರಿ" ದೇಶವನ್ನಾಗಿ ಮಾಡಿವೆ ಎಂದು ಪೈಜ್ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಭಾರತದಲ್ಲಿ ಪ್ರಯಾಣಿಸುವಾಗ ನಾನು ಅನುಭವಿಸಿದ ಅನೇಕ ಅದ್ಭುತ ದಯೆಯ ಕಾರ್ಯಗಳಲ್ಲಿ ಇವು ಕೆಲವೇ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಒಬ್ಬಂಟಿ ಮಹಿಳಾ ಪ್ರಯಾಣಿಕಳಾಗಿ ನಾನು ಸಂಪೂರ್ಣವಾಗಿ ಏಕಾಂಗಿಯಾಗಿ ಹಿಂತಿರುಗಲು ಹೆದರುತ್ತಿದ್ದೆ. ಆದರೆ, ನನಗೆ ಇದಕ್ಕಿಂತ ಹೆಚ್ಚಿನ ಸ್ವಾಗತ ಬೇರೆಡೆ ಸಿಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಭಾರತದಲ್ಲಿ ಜನರು ನಿರಂತರವಾಗಿ ಇತರರಿಗೆ ಸಹಾಯ ಮಾಡಲು ತಮ್ಮ ಕೆಲಸವನ್ನು ಬಿಟ್ಟು ಕೂಡ ಸಹಾಯ ಮಾಡುತ್ತಾರೆ. ನಾನು ಈ ದೇಶವನ್ನು ಪ್ರೀತಿಸಲು ಇದು ಹಲವು ಕಾರಣಗಳಲ್ಲಿ ಒಂದಾಗಿದೆ ಎಂದರು.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಭಾರತೀಯರ ಬಗ್ಗೆ ಸಕಾರಾತ್ಮಕ ವಿಮರ್ಶೆಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಇದು ಜಗತ್ತನ್ನು ತಲುಪಬೇಕೆಂದು ನಾನು ಬಯಸುತ್ತೇನೆ. ಕೆಲವೊಂದು ಕೆಟ್ಟ ವಿಚಾರಗಳು ಕಾಡ್ಗಿಚ್ಚಿನಂತೆ ಹರಡುತ್ತವೆ. ಒಳ್ಳೆಯ ವಿಷಯಗಳು ಕೂಡಾ ಹರಡಬೇಕೆಂದು ನಾನು ಬಯಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಸಂಸ್ಕೃತದಲ್ಲಿ 'ಅತಿಥಿ ದೇವೋ ಭವ' ಎಂದರೆ ಅತಿಥಿಗಳು ದೇವರ ಪ್ರತಿನಿಧಿಗಳು. ನಿಮ್ಮ ಪ್ರವಾಸವನ್ನು ಆನಂದಿಸಿ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ (ಏಜೆನ್ಸೀಸ್).