ಗೋಕರ್ಣದ ಬೀಚ್ ಬಳಿ ಕ್ರೌರ್ಯಕ್ಕೆ ಒಳಗಾಗಿ ಗೋವಾದ ಕಾಣಕೋಣದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ನಾಯಿ(Dog).
ಗೋಕರ್ಣ: ನಮ್ಮ ದೇಶದ ಮಟ್ಟಿಗೆ ಇದು ವಿಚಿತ್ರವಾದರೂ ಗೋಕರ್ಣದಲ್ಲಿ ನಡೆದಿರುವ ಸತ್ಯ ಘಟನೆಯಿದು.
ನಾಯಿಯೊಂದರ (Dog) ಮೇಲೆ ಕ್ರೌರ್ಯ ನಡೆಸಿ ಅದರ ಕಾಲು ಮುರಿತಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಪ್ರಾಣಿ ವಿರೋಧಿ ಕ್ರೌರ್ಯತೆ ಹಾಗೂ ಪ್ರಾಣಿದಯಾ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸುವಂತೆ ಸ್ಥಳೀಯ ಪೊಲೀಸರಿಗೆ ವಿದೇಶಿ ಪತ್ರಕರ್ತೆಯೊಬ್ಬರು ಬುಧವಾರ ದೂರು ದಾಖಲಿಸಿದ್ದಾರೆ.
ಹಿನ್ನೆಲೆ: ಗ್ರೇಟ್ ಬ್ರಿಟನ್‌ನ (ಜಿಬಿಆರ್) ಐರ್ಲ್ಯಾಂಡ್ ದೇಶದ ಯುರೆನೆಕ್ ನಗರದ ನ್ಯಾಶನಲ್ ನ್ಯೂಸ್ ಪೇಪರ್ ಪತ್ರಕರ್ತೆ ವೋನ್ ಮೆರಿ ಮೊರನ್(60) ದೂರು ನೀಡಿದವರು.
ಕಳೆದ 2023ರ ಡಿಸೆಂಬರ್ 18 ಮತ್ತು 2025ರ ಡಿಸೆಂಬರ್ 3ರಂದು ತಾನು ನೋಡಿದ ನಾಯಿಯ ಮೇಲಿನ ದೌರ್ಜನ್ಯವನ್ನು ಅವರು ಪೊಲೀಸ್ ದೂರಿನಲ್ಲಿ ದಾಖಲಿಸಿದ್ದಾರೆ.
ಗೋಕರ್ಣ ಮೇನ್ ಬೀಚ್ ಸಮೀಪದ ರೆಸ್ಟೋರೆಂಟ್ ಒಂದರ ಹಿಂದಿರುವ ಕೆಲವರು 2025ರ ಡಿ. 3ರಂದು ಕರಿ ಬಣ್ಣದ ನಾಯಿಯೊಂದಕ್ಕೆ ಅನಾಗರಿಕವಾಗಿ ಮತ್ತು ಕ್ರೂರವಾಗಿ ಹೊಡೆದಿದ್ದಾರೆ.
ಇದರಿಂದ ನಾಯಿಯ ಕಾಲು ಮುರಿತಕ್ಕೆ ಒಳಗಾಗಿ ಅದು ತಿರುಗಾಡಲು ಸಾಧ್ಯವಿಲ್ಲದಂತಾಗಿದೆ.
ಇದನ್ನು ಕಂಡ ನಾನು ತೀವ್ರವಾಗಿ ಹಿಂಸೆಗೊಳಗಾದ ನಾಯಿಯನ್ನು ಗೋವಾದ ಕಾಣಕೋಣದಲ್ಲಿರುವ ಪ್ರಾಣಿ ಸಂರಕ್ಷಣಾ ಕೇಂದ್ರ(ಎಆರ್‌ಸಿ)ಕ್ಕೆ ದಾಖಲಿಸಿ ನನ್ನದೇ ಖರ್ಚಿನಲ್ಲಿ ಚಿಕಿತ್ಸೆ ನೀಡಿದ್ದೇನೆ.
ನಾಯಿಯ ಮೇಲೆ ಹಿಂಸೆ ಮಾಡುತ್ತಿರುವುದನ್ನು ಯುರೋಪಿನ ಇಬ್ಬರು ಪ್ರವಾಸಿಗರು ಕೂಡ ನೋಡಿದ್ದಾರೆ. 2023ರ ಡಿಸೆಂಬರ್‌ನಲ್ಲಿಯೂ ಇಂತಹದೇ ಘಟನೆ ನಡೆದು ನಾಯಿಯೊಂದಕ್ಕೆ ಬಲವಾಗಿ ಹೊಡೆದು ಅದರ ಸೊಂಟವನ್ನು ಮುರಿದು ನಂತರ ಅದರ ಸಾವಿಗೆ ಕಾರಣರಾಗಿದ್ದಾರೆ.
ತಮ್ಮ ಮನೆಯಲ್ಲಿ ಕೋಳಿಗಳನ್ನು ಸಾಕುವವರು ಬೀಚ್‌ನಲ್ಲಿ ಬಡಿಗೆ ಹಿಡಿದು ಓಡಾಡುತ್ತ ಕೋಳಿಯ ಬಳಿ ನಾಯಿ ಬರುವುದನ್ನು ತಡೆಯಲು ಇಂತಹ ಕ್ರೌರ್ಯಕ್ಕೆ ಮುಂದಾಗುತ್ತಾರೆ.
ಪ್ರಾಣಿಗಳ ಮೇಲೆ ಕ್ರೂರ ದೌರ್ಜನ್ಯ ಎಸಗಿದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಪಿಎಸ್‌ಐ ಖಾದರ್ ಬಾಷಾ ಪ್ರಕರಣ ದಾಖಲಿಸಿಕೊಂಡು ಪಂಚರ ಸಮಕ್ಷಮ ಸ್ಥಳ ಪರಿಶೀಲನೆ ನಡೆಸಿದರು.
ಬ್ರಿಟಿಶ್ ಕಾಲದಿಂದ ಸೇವೆಯಲ್ಲಿರುವ ಗೋಕರ್ಣ ಪೊಲಿಸ್ ಠಾಣೆಯ ಇತಿಹಾಸದಲ್ಲಿ ವಿದೇಶಿಯೋರ್ವಳಿಂದ ಇದೇ ಮೊದಲ ಬಾರಿಗೆ ದಾಖಲಾದ ಅತಿ ಅಪರೂಪದ ದೂರು ಇದಾಗಿದೆ.