ದಾಂಡೇಲಿಯ ಲೆನಿನ ರಸ್ತೆಯಲ್ಲಿರುವ ಹೋಟೆಲ್ ಒಂದರ ಫುಟ್ಪಾತ್ ಒತ್ತುವರಿಯನ್ನು ತೆರವುಗೊಳಿಸುತ್ತಿರುವ ನಗರಸಭೆ ಪೌರ ಕಾಮಿರ್ಕರು.
ದಾಂಡೇಲಿ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಗರದಲ್ಲಿ ಫುಟ್ಪಾತ್ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.
ನಗರಸಭೆ ಅಧಿಕಾರಿಗಳು ಮೊದಲು ಲೆನಿನ್ ರಸ್ತೆಯಲ್ಲಿರುವ ಫುಟ್ಪಾತ್ ಅತಿಕ್ರಮಣ ತೆರವಿಗೆ ಮುಂದಾದಾಗ, ಒತ್ತುವರಿದಾರರು ಮತ್ತು ಅಧಿಕಾರಿಗಳ ನಡುವೆ ಕೆಲ ಸಮಯ ವಾಗ್ವಾದ ನಡೆಯಿತು. ಬಳಿಕ ಒತ್ತುವರಿ ಮಾಡಿಕೊಂಡಿರುವವರೇ ಸ್ವಯಂಪ್ರೇರಿತವಾಗಿ ಅತಿಕ್ರಮಣ ತೆರವುಗೊಳಿಸುವುದಾಗಿ ನಗರಸಭೆಗೆ ತಿಳಿಸಿದರು. ಅದೇ ರೀತಿ ಜೆ.ಎನ್. ರಸ್ತೆಯ ಫುಟ್ಪಾತ್ನಲ್ಲಿ ಅನಧಿಕೃತವಾಗಿ ನಿಮಿರ್ಸಲಾಗಿದ್ದ ಶೆಡ್ ಒಂದನ್ನು ತೆರವುಗೊಳಿಸಲು ಮುಂದಾದಾಗ, ಒತ್ತುವರಿದಾರರು ತಾವಾಗಿಯೇ ತೆರವು ಕಾರ್ಯಕ್ಕೆ ಮುಂದಾದರು.
ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ಅವರ ನಿರ್ದೇಶನದಲ್ಲಿ ನಡೆದ ಈ ಒತ್ತುವರಿ ತೆರವು ಕಾರ್ಯಾಚರಣೆಯ ನೇತೃತ್ವವನ್ನು ನಗರಸಭೆಯ ವ್ಯವಸ್ಥಾಪಕ ಪರಶುರಾಮ ಶಿಂಧೆ, ಕಂದಾಯ ಅಧಿಕಾರಿ ಬಾಳು ಗವಸ ಮತ್ತು ಆರೋಗ್ಯ ನಿರೀಕ ವಿಲಾಸ್ ವಹಿಸಿದ್ದರು. ಒತ್ತುವರಿ ತೆರವಿಗೆ ಪೌರ ಕಾಮಿರ್ಕರು ಸಹಕರಿಸಿದರು. ಫುಟ್ಪಾತ್ ಒತ್ತುವರಿ ಮಾಡಿಕೊಂಡಿರುವವರು ಕೂಡಲೇ ಸ್ವಯಂ ತೆರವುಗೊಳಿಸುವ ಮೂಲಕ ನಗರಸಭೆಗೆ ಸಹಕರಿಸಬೇಕು ಎಂದು ನಗರಸಭೆ ವ್ಯವಸ್ಥಾಪಕ ಪರಶುರಾಮ ಶಿಂಧೆ ಅವರು ಮಾಧ್ಯಮದ ಮೂಲಕ ಮನವಿ ಮಾಡಿದರು.