ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಕಾರವಾರ: ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮೀನಿನ ಬುಟ್ಟಿ ಕೊಂಡೊಯ್ಯಲು ಅವಕಾಶ ನೀಡುವಂತೆ ಮೀನುಗಾರ ಮಹಿಳೆಯರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಸತೀಶ ಸೈಲ್ ಅವರಿಗೆ ಮನವಿ ಸಲ್ಲಿಸಿದರು.
ಕರಾವಳಿಯಲ್ಲಿ ಮೀನು ಸವಿಯುವವರ ಸಂಖ್ಯೆ ಹೆಚ್ಚಿದೆ. ಇಲ್ಲಿ ಮೀನುಗಾರಿಕೆ ವೃತ್ತಿಯೂ ವ್ಯಾಪಕವಾಗಿದೆ. ನೂರಾರು ಮಹಿಳೆಯರು ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ. ಮುದಗಾ, ದೇವಬಾಗ, ಮಾಜಾಳಿ ಮುಂತಾದ ಮೀನುಗಾರಿಕೆ ತಾಣಗಳಿಂದ ಮೀನುಗಾರ ಮಹಿಳೆಯರು ಬಸ್‌ಗಳಲ್ಲಿ ಮೀನು ತಂದು ಕಾರವಾರ, ಸದಾಶೀವಗಡ, ಅಮದಳ್ಳಿ ಮುಂತಾದೆಡೆ ತಂದು ಮಾರಾಟ ಮಾಡುತ್ತಾರೆ.
ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗೆ ಇದೇ ವೃತ್ತಿ ನಂಬಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮೀನು ಬುಟ್ಟಿ ಹಾಕಲು ಬಿಡುತ್ತಿಲ್ಲ. ಕಂಡಕ್ಟರ್‌ಗಳು ಸಾರಿಗೆ ಸಂಸ್ಥೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂಬ ಉತ್ತರ ನೀಡುತ್ತಿದ್ದಾರೆ.
ಮೊದಲು ಬುಟ್ಟಿಯಲ್ಲಿ ಮೀನು ತಂದರೆ ನೀರು ಬಿದ್ದು ವಾಸನೆಯಾಗುತ್ತದೆ ಎಂಬ ದೂರಿತ್ತು. ಇದರಿಂದ ಬಕೆಟ್ ವ್ಯವಸ್ಥೆ ಮಾಡಿದ್ದೇವೆ. ಅದಕ್ಕೂ ಅವಕಾಶ ನೀಡುತ್ತಿಲ್ಲ. ಬಡ ಮಹಿಳೆಯರು ಖಾಸಗಿ ವಾಹನದಲ್ಲಿ ಓಡಾಡುವಷ್ಟು ಸಬಲರಲ್ಲ. ಶಕ್ತಿ ಯೋಜನೆ ಜಾರಿಯಲ್ಲಿದ್ದರೂ ಮಹಿಳೆಯರಿಗೆ ಅದು ಅನುಕೂಲವಾಗದಂತಾಗಿದೆ ಎಂದು ಸಮಸ್ಯೆ ಹೇಳಿಕೊಂಡರು.
ಇನ್ನು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಮೀನು ಸಾಗಿಸಲೂ ಬಿಡುತ್ತಿಲ್ಲ. ಸರ್ಕಾರದ ಈ ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿ ಎಡಿಸಿ ಸಾಜಿದ್ ಮುಲ್ಲಾ, ಸಾರಿಗೆ ನಿಗಮದ ಅಽಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಗಂಗೆ ದುರ್ಗೇಕರ್, ಸುರೇಖಾ ತಾಂಡೇಲ, ಮಂಗಲಾ ತಾಂಡೇಲ, ಚಂದ್ರಹಾಸ ಗಿರಫ್, ಮಂಜುನಾಥ ಮುದ್ಗೇಕರ್, ತೋಕು ಹರಿಕಂತ್ರ ಇತರರು ಇದ್ದರು.