ದಾಂಡೇಲಿ ಶ್ರೇಯಸ್ ಕಾರ್ಖಾನೆ ಆವರಣದಲ್ಲಿ ಮತ್ತೆ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ನಿರುಪಯುಕ್ತ ವಸ್ತುಗಳಿಗೆ ಬೆಂಕಿ ಹತ್ತಿಕೊಂಡಿದ್ದು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು.
ದಾಂಡೇಲಿ: ತಾಲೂಕಿನ ಕೇರವಾಡದಲ್ಲಿರುವ ಶ್ರೇಯಸ್ ಶ್ರೀನಿಧಿ ಕಾರ್ಖಾನೆ ಆವರಣಲ್ಲಿ ರಾಶಿ ಹಾಕಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ನಿರುಪಯುಕ್ತ ವಸ್ತುಗಳಿಗೆ ಮತ್ತೆ ಬೆಂಕಿ ಹೊತ್ತಿಕೊಂಡಿದ್ದು, ಹಳಿಯಾಳ ಮತ್ತು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನ ಬೆಂಕಿ ನಂದಿಸಲು ಹರಸಾಹಸ ಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಕೆಲ ದಿನಗಳ ಹಿಂದೆಯೂ ಇದೇ ರೀತಿ ಇಲ್ಲಿ ಪ್ಲಾಸ್ಟಿಕ್ ಹಾಗೂ ನಿರುಪಯುಕ್ತ ತ್ಯಾಜ್ಯ ವಸ್ತುಗಳ ರಾಶಿ ಬೆಂಕಿಯಿಂದ ಸುಟ್ಟ ಘಟನೆ ನಡೆದಿದ್ದು, ಇದರಿಂದ ಎರಡ್ಮೂರು ದಿನಗಳವರೆಗೆ ಸ್ಥಳೀಯ ಪರಿಸರದಲ್ಲಿ ಗಬ್ಬು ವಾಸನೆ ಹರಡಿತ್ತು. ಆನಂತರ ಸ್ಥಳಕ್ಕೆ ತಾಪಂ ಇಒ ಭೇಟಿ ನೀಡಿ ಕಾರ್ಖಾನೆ ಮುಖ್ಯಸ್ಥರಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಅದರೆ, ಪುನಃ ಬೆಂಕಿ ವ್ಯಾಪಕವಾಗಿ ಹರಡಿಕೊಂಡಿದೆ. ಸ್ಥಳೀಯರು ಈ ಬಗ್ಗೆ ಆಲೂರು ಪಿಡಿಒ ಅವರಿಗೆ ಕರೆ ಮಾಡಿದರೇ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಸ್ಥಳದಲ್ಲಿ ಆಲೂರು ಗ್ರಾಪಂ ನಿಕಟಪೂರ್ವ ಸದಸ್ಯ ಸುಭಾಷ ಭೋವಿವಡ್ಡರ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಸ್ಥಳಕ್ಕೆ ತಹಸೀಲ್ದಾರ್ ಶೈಲೇಶ ಪರಮಾನಂದ, ಸಿಪಿಐ ಶಿವಾನಂದ ಅಂಬಿಗೇರ, ಪೊಲೀಸ್, ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಇದೀಗ ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.