ಹೊನ್ನಾವರ ತಾಲೂಕಿನ ಕವಲಕ್ಕಿ ಗಾಣಗೇರಿಯಲ್ಲಿ ಹುಲ್ಲು ತುಂಬಿದ ವಾಹನಕ್ಕೆ ಬೆಂಕಿ ತಗುಲಿರುವುದು 
ಉತ್ತರ ಕನ್ನಡ

ವಾಹನದಲ್ಲಿ ಸಾಗಿಸುತ್ತಿದ್ದ ಹುಲ್ಲಿಗೆ ಬೆಂಕಿ

ಹೊನ್ನಾವರ: ತಾಲೂಕಿನ ಕವಲಕ್ಕಿ ಸಮೀಪದ ಗಾಣಗೇರಿಗೆ ಹೋಗುವ ರಸ್ತೆಯಲ್ಲಿ ಹುಲ್ಲು ತುಂಬಿದ ವಾಹನಕ್ಕೆ ಬೆಂಕಿ ತಗುಲಿದ್ದು ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ವಿದ್ಯುತ್ ಲೈನ್ ಸ್ಪರ್ಶಿಸಿ ಬೆಂಕಿ ತಗುಲಿದೆ ಎನ್ನಲಾಗಿದೆ.
ಸೊರಬ ತಾಲೂಕಿನ ಎಣ್ಣೆಕೊಪ್ಪದಿಂದ ಟಾಟಾಏಸ್ ವಾಹನದಲ್ಲಿ ಹುಲ್ಲು ತುಂಬಿಕೊಂಡು ಬಂದು ಗಾಣಗೇರಿ ರಸ್ತೆ ಮೂಲಕ ವ್ಯಾಪಾರಕ್ಕೆ ಹೋಗುತ್ತಿದ್ದಾಗ ಬೆಂಕಿ ತಗುಲಿರುವುದು ಗಮನಕ್ಕೆ ಬಾರದೆ ವಾಹನ ಚಲಾಯಿಸಿ ಕೊಂಡು ಹೋಗುತ್ತಿದ್ದರು. ಸ್ಥಳೀಯರು ಹುಲ್ಲಿಗೆ ಬೆಂಕಿ ತಗುಲಿದ್ದು ನೋಡಿ ಕೂಗಿದಾಗ ಹುಲ್ಲಿನ ಗಾಡಿಯವರ ಗಮನಕ್ಕೆ ಬಂದಿದೆ. ಘಟನೆ ನಡೆದ ಸ್ವಲ್ಪ ದೂರದಲ್ಲಿ ಇರುವ ಮನೆಯ ಸಮೀಪ ವಾಹನ ನಿಲ್ಲಿಸಿ, ಸ್ಥಳೀಯರ ಸಹಕಾರದಿಂದ ಬೆಂಕಿ ಹೊತ್ತಿರುವ ಹುಲ್ಲನ್ನು ಕೆಳಗೆ ಹಾಕಿ, ಹತ್ತಿರದ ಮನೆಯಿಂದ ನೀರು ತಂದು ವಾಹನಕ್ಕೆ ಬೆಂಕಿ ಹಬ್ಬದಂತೆ ತಡೆದಿದ್ದಾರೆ.
ವಾಹನಕ್ಕೆ ಬೆಂಕಿ ಬಿದ್ದಿದ್ದು ಗಮನಕ್ಕೆ ಬಂದ ತಕ್ಷಣ ಅಗ್ನಿಶಾಮಕ ಠಾಣೆಗೂ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕೆಳಗೆ ರಾಶಿ ಬಿದ್ದಿರುವ ಹುಲ್ಲಿಗೆ ತಗುಲಿದ ಬೆಂಕಿಯನ್ನು ಆರಿಸಿದ್ದಾರೆ.