ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಆಯೋಜಿಸಿದ್ದ ಸರ್ವದಂಪತಿ ಶಿಬಿರದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು. (about feticide)
ಶಿರಸಿ: ಭ್ರೂಣ ಹತ್ಯೆ (Feticide) ಮನುಷ್ಯನನ್ನು ಕೊಲೆ ಮಾಡಿದ್ದಕ್ಕಿಂತ ಜಾಸ್ತಿ ಪಾಪ. ಮಗು ಭೂಮಿಗೆ ಬರುವುದಕ್ಕಿಂತ ಮುನ್ನವೇ ಹತ್ಯೆ ನಡೆದರೆ ಸಮಾಜದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ಮಾರಿಕಾಂಬಾ ದೇವಾಲಯದಲ್ಲಿ ಶನಿವಾರ ಆಯೋಜಿಸಿದ್ದ ಸರ್ವ ದಂಪತಿ ಶಿಬಿರದ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದಂಪತಿ ಹೊಂದಾಣಿಕೆಯಿಂದ ಜೀವನ ನಡೆಸುವ ಮೂಲಕ ವಿಚ್ಛೇದನ ಆಗದಂತೆ ನೋಡಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಮುಂದಿನ ಯುವ ಜನಾಂಗವನ್ನು ರೂಪಿಸಬೇಕು. ಭ್ರೂಣ ಹತ್ಯೆ ನಿರ್ಮೂಲನೆಯ ನಿಟ್ಟಿನಲ್ಲಿ ಸರ್ವದಂಪತಿಗಳ ಶಿಬಿರವನ್ನು ಆರಂಭ ಮಾಡಲಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಕುಟುಂಬ ವ್ಯವಸ್ಥೆ ಹಾಳಾಗುತ್ತಿದ್ದು, ತಂದೆ ತಾಯಿಗಳು ದೂರವಾಗಿ ಮಕ್ಕಳಿಗೆ ಸಂಸ್ಕಾರ ಸಿಗದಂತಾಗುತ್ತದೆ.
ಧರ್ಮದ ಪ್ರಕಾರ ವಿವಾಹ ವಿಚ್ಛೇದನ ತಪ್ಪು. ಅದಕ್ಕೆ ಅವಕಾಶವೇ ಇಲ್ಲ. ಕಾರಣಾಂತರಗಳಿಂದ ಕಾನೂನಿನಲ್ಲಿ ವಿವಾಹ ವಿಚ್ಛೇದನಕ್ಕೆ ಅವಕಾಶವಿದ್ದರೂ ಸಹ ಮೊದಲು ಒಂದುಗೂಡಿಸುವದಕ್ಕೆ ಅವರು ಪ್ರಯತ್ನಿಸುತ್ತಾರೆ. ವಿಚ್ಛೇದನ ಆಗದಂತೆ ದಂಪತಿಗಳು ಸಂಸಾರ ನಡೆಸಬೇಕು.
ದಂಪತಿಗಳ ಮಧ್ಯೆ ಹೊಂದಾಣಿಕೆ ಇರಬೇಕು. ಪರಸ್ಪರ ಹೊಂದಾಣಿಕೆ ಮೂಲಕ ಜೀವನ ನಡೆಸಿದರೆ ವಿಚ್ಛೇದನ ಪ್ರಕರಣ ಇಳಿಮುಖವಾಗುತ್ತವೆ ಎಂದರು.
ಪ್ರತಿ ದಂಪತಿಗೆ ಕನಿಷ್ಠ 3 ಸಂತಾನಗಳಿರಬೇಕು. ಹಿಂದೂ ಸಮಾಜದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಮನೆಯಲ್ಲಾಗುವ ಭಜನೆ ಪೂಜೆಯಲ್ಲಿ ಮಕ್ಕಳು ತೊಡಗುವಂತೆ ಮಾಡಬೇಕು.
ಟಿವಿ ಮೊಬೈಲ್ ಬಳಕೆಯಿಂದ ದೂರವಿದ್ದು ಕುಟುಂಬ ಸದಸ್ಯರೊಂದಿಗೆ ಬೆರೆಯುವಂತೆ ಮಾಡಬೇಕು ಎಂದರು.
ಮನೆಯಲ್ಲಿನ ಹವ್ಯಾಸಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯ ಸಂಸ್ಕಾರ ನೀಡುವುದು ತಂದೆ ತಾಯಿಗಳ ಕರ್ತವ್ಯವಾಗಿದೆ.
ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.ಆಗ ನಮ್ಮ ನಡುವಳಿಕೆ ಸಹ ಉತ್ತಮವಾಗಿರುತ್ತದೆ ಎಂದರು.
ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವೀಂದ್ರ ನಾಯ್ಕ, ಗ್ರಾಭ್ಯುದಯ ಅಧ್ಯಕ್ಷ ರಾಮಚಂದ್ರ ಹೆಗಡೆ ಇತರರಿದ್ದರು.
ಇದಕ್ಕೂ ಮುನ್ನ ಯೋಗ ಮತ್ತು ನಿಸರ್ಗ ಚಿಕಿತ್ಸೆ ಕುರಿತು ಡಾ.ಕೀರ್ತಿ ಕೆ., ಸತ್ ಸಂತಾನಕ್ಕಾಗಿ ಆಯುರ್ವೇದ ಸೂತ್ರಗಳ ಕುರಿತು ಡಾ.ವಿನಾಯಕ ಹೆಬ್ಬಾರ, ಸತ್ ಸಂತಾನಕ್ಕಾಗಿ ಶಾಸ್ತ್ರ ಸೂತ್ರಗಳ ಕುರಿತು ಸೀತಾರಾಮ ಭಟ್ ಮತ್ತಿಗಾರ, ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಮತ್ತು ಕುಟುಂಬ ಜೀವನದ ಮಹತ್ವದ ಕುರಿತು ಕೃಷ್ಣ ಶ್ರೀನಿವಾಸ ದೇಶಪಾಂಡೆ ಗೋಷ್ಠಿಗಳನ್ನು ನಡೆಸಿ ಮಾಹಿತಿ ನೀಡಿದರು.