ಕಾರವಾರ: ಸಾರಾಯಿ ಕುಡಿಯಲು ಕೊಡುವುದಿಲ್ಲ ಎಂಬ ಕಾರಣಕ್ಕೆ ಮನೆ ಅಳಿಯನನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಶಿರಸಿ ಮಳಲಿ ಗ್ರಾಮದ ವೆಂಕಟರಮಣ ಗಣಪಾ ಗೌಡ ಶಿಕ್ಷೆಗೊಳಗಾದ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮನೆ ಅಳಿಯ ಮಂಜುನಾಥ ರಾಮಾ ಗೌಡ(40) ಎಂಬಾತನನ್ನು 2024 ರ ಮೇ 2 ರಂದು ಹೊಡೆದು ಕೊಲೆ ಮಾಡಿದ್ದ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಸೀತಾರಾಮ ಪಿ.ಅವರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಹೆಡ್ ಕಾನ್ಸ್ಟೇಬಲ್ ಮಹೇಶ ನಾಯ್ಕ, ಕಾನ್ಸ್ಟೇಬಲ್ ಶಂಕರಾಚಾರಿ ಎನ್. ಅವರು ಸಾಕ್ಷಿಗಳ ವಿಚಾರಣೆಗೆ ಸಹಕರಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಎಂ.ಮಳಗೀಕರ್ ಅವರು ಸಮರ್ಥ ವಾದ ಮಂಡಿಸಿದ್ದರು.
ಅಪರಾಧ ಸಾಬೀತಾದ ಕಾರಣ ನ್ಯಾಯಾಧೀಶ ಕಿರಣ ಕಿಣಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಅಪರಾಧಿಗೆ 10 ಸಾವಿರ ರೂ. ದಂಡ ವಿಧಿಸಿದ್ದು, ಮೃತನ ಪತ್ನಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.