ಕಾರವಾರ: ಮಾದಕ ವಸ್ತು ಬಳಕೆಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಕೈದಿಗಳಿಬ್ಬರು ಜೈಲರ್ ಹಾಗೂ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶನಿವಾರ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಜೈಲರ್ ಕಲ್ಲಪ್ಪ ಗಸ್ತಿ, ಬಿ.ಡಿ.ತೆವರಿ, ಮಹೇಳ ಬಡೋಳಿ, ಮಹೇಶ ಗೌಡ, ರಾಘವ ನಾಯಕ, ಶ್ರೀನಾಥ ರಾಠೋಡ, ಸ್ಯಾಮ್ಯೂವೆಲ್ ಯಂಗ್ ಇವರ ಮೇಲೆ ಮಂಗಳೂರು ಮೂಲದ ಮೊಹಮದ್ ಅಬ್ದುಲ್ ಫಯಾನ್ ಹಾಗೂ ಕೌಶಿಕ್ ನಿಹಾಲ್ ಎಂಬ ಕೈದಿಗಳು ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಅಧಿಕಾರಿ, ಸಿಬ್ಬಂದಿಯನ್ನು ಹಾಗೂ ಇಬ್ಬರು ಕೈದಿಗಳನ್ನೂ ಕ್ರಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರು ಕೈದಿಗಳನ್ನು ಕೆಲ ದಿನಗಳ ಹಿಂದೆ ಮಂಗಳೂರು ಜೈಲಿನಿಂದ ಕಾರವಾರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇವರ ಮೇಲೆ 12 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗೆ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುವ ಆರೋಪ ಕೇಳಿ ಬಂದಿತ್ತು. ವಿಡಿಯೋಗಳು ವೈರಲ್ ಆಗಿದ್ದವು. ಕಾರವಾರ ಜೈಲಿನಲ್ಲೂ ಮೊಬೈಲ್ ಹಾಗೂ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಇದರಿಂದ ಎಲ್ಲೆಡೆ ಜೈಲುಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಇಬ್ಬರು ಕೈದಿಗಳು ಮಾದಕ ವಸ್ತುಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದನ್ನು ನೀಡದೇ ಇದ್ದಾಗ ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ಕೈದಿಗಳ ಜತೆ ಮಾತನಾಡುತ್ತಿರುವಾಗ ಹಲ್ಲೆ ಮಾಡಿ, ಕಂಪ್ಯೂಟರ್‌ಗಳನ್ನು ಮುರಿದು ಹಾಕಿದ್ದಾರೆ. ಅಲ್ಲದೇ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹಲ್ಲೆ ನಡೆಸಿದ ವಿಡಿಯೋಗಳೂ ವೈರಲ್ ಆಗಿವೆ. ಜೈಲಿನಲ್ಲಿ ಗಲಾಟೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಕೈದಿಗಳನ್ನು ನಿಯಂತ್ರಿಸಲು ಯತ್ನಿಸಿದರು. ಅವರ ಮೇಲೂ ಇಬ್ಬರು ಹಲ್ಲೆಗೆ ಮುಂದಾದರು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
......