ಶಿರಸಿ ತಾಲೂಕಿನ ದಾಸನಕೊಪ್ಪದ ರೈತ ರಾಕೇಶ ಅಡಿಕೆ ಗಿಡಗಳು ಸಾಯುತ್ತಿರುವುದನ್ನು ಕಂಡು ಜೆಸಿಬಿ ಮೂಲಕ ಕಿತ್ತು ಹಾಕಿದರು. 
ಉತ್ತರ ಕನ್ನಡ

Farmer uproots 800 ಅಡಿಕೆ ಗಿಡ ಕಿತ್ತೆಸೆದ ರೈತ

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಮಳೆ ಕೊರತೆ, ನೀರಿಲ್ಲದೆ ಒಣಗಿದ ತೋಟ
  • ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ಘಟನೆ
ಶಿರಸಿ: ಕೈಕೊಟ್ಟ ಮುಂಗಾರಿನಿಂದ ಅಂದಾಜು 800 ಅಡಿಕೆ ಗಿಡಗಳು ಒಣಗುತ್ತಿರುವುದನ್ನು ನೋಡಲಾಗದೆ ಸ್ವತಃ ರೈತರೊಬ್ಬರು ಜೆಸಿಬಿ ಯಂತ್ರದ ಮೂಲಕ ಕಿತ್ತೆಸೆದ ಘಟನೆ ತಾಲೂಕಿನ ದಾಸನಕೊಪ್ಪದಲ್ಲಿ ಶನಿವಾರ ನಡೆದಿದೆ.
ರಾಕೇಶ ರಾಮಚಂದ್ರ ಅಗಸರ ಎಂಬ ರೈತ ಎರಡು ಎಕರೆ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದರು. ನಾಲ್ಕು ವರ್ಷ ಪ್ರಾಯದ ಈ ಗಿಡಗಳು ಇನ್ನೆರಡು ವರ್ಷಗಳಲ್ಲಿ ಫಸಲು ನೀಡುವ ಹಂತಕ್ಕೆ ತಲುಪಲಿದ್ದವು. ಆದರೆ, ನಿರಂತರ ಮಳೆ ಕೊರತೆ ಹಾಗೂ ನೀರಿನ ಅಭಾವದಿಂದ ಅವರ ಕನಸು ಭಗ್ನವಾಗಿದೆ. ಒಟ್ಟು ಆರು ಬೋರ್‌ವೆಲ್ ಕೊರೆಸಿದ್ದರಾದರೂ ಐದು ವಿಫಲವಾಗಿದ್ದವು. ನೀರು ಬಿದ್ದ ಒಂದು ಬೋರ್‌ವೆಲ್ ಮೂಲಕವೇ ಇಷ್ಟು ದಿನಗಳ ಕಾಲ ಅಡಿಕೆ ಗಿಡಕ್ಕೆ ನೀರುಣಿಸಿದ್ದರು. ಆದರೆ, ಕಳೆದ ಮೂರು ತಿಂಗಳಿನಿಂದ ಈ ಬೋರ್‌ವೆಲ್ ವಿಫಲವಾಗಿದ್ದರಿಮದ ಬೇಸತ್ತ ಅವರು, ಅಡಿಕೆ ತೋಟವನ್ನೇ ತೆಗೆದುಹಾಕುವ ನಿರ್ಧಾರ ಕೈಗೊಂಡಿದ್ದಾರೆ.
ನೀರಿನ ಕೊರತೆಯಿಂದ ಅಡಿಕೆ ಗಿಡಗಳು ಒಂದೊಂದಾಗಿ ಒಣಗತೊಡಗಿದ್ದರಿಂದ ತೋಟವನ್ನು ಉಳಿಸಿಕೊಳ್ಳುವುದು ಅಸಾಧ್ಯ ಎಂಬ ನಿರ್ಧಾರಕ್ಕೆ ಬಂದ ರಾಕೇಶ, ನೋವಿನ ಮನಸ್ಥಿತಿಯಲ್ಲಿ ಇಡೀ ತೋಟವನ್ನೇ ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆಸಿದ್ದ ತೋಟ ನಾಶವಾದ ಪರಿಣಾಮ ಇದೀಗ ಸಾಲದ ಹೊರೆ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಕೇಶ ಅಗಸರ, ಕೃಷಿಯ ಮೇಲಿನ ಆಸಕ್ತಿಯಿಂದ ಸಾಲ ಮಾಡಿ ತೋಟ ಬೆಳೆಸಿದ್ದರೂ ಮಳೆ ಕೊರತೆ ಮತ್ತು ನೀರಿನ ಅಭಾವದಿಂದ ಎಲ್ಲವೂ ನಷ್ಟವಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಿ ನಮ್ಮಂತಹ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.