ಕಾರವಾರ: ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದೇ ಇರುವುದನ್ನು ನಾನು ಖಂಡಿಸುತ್ತೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರಕ್ಕೆ ಭೇಟಿ ನೀಡಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಮಹಿಳಾ ಸಚಿವರಿಲ್ಲದೇ ಸದನ ನಡೆಸುವುದು ಸದನಕ್ಕೆ ಅಗೌರವ ತೋರಿದಂತೆ. ಈಗಾಗಲೇ ಸರ್ಕಾರ ಬಂದು 5 ತಿಂಗಳು ಕಳೆದು ಹೋಯಿತು. ಆದಷ್ಟು ಬೇಗ ಮಹಿಳೆಯರಿಗೆ ಸ್ಥಾನ ಕೊಡಬೇಕು ಎಂದು ಆಯೋಗದ ಅಧ್ಯಕ್ಷೆಯಾಗಿ ಪತ್ರ ಬರೆದಿದ್ದೇನೆ ಮತ್ತು ಸರ್ಕಾರಕ್ಕೆ ಕೇಳಿಕೊಂಡಿದ್ದೇನೆ ಎಂದರು.
ಕಾಂಗ್ರೆಸ್ ಮಾತ್ರವಲ್ಲ. ಯಾವುದೇ ಪಕ್ಷದವರು ಮಹಿಳೆಯರಿಗೆ ಸ್ಥಾನ ಕೊಡುವುದಿಲ್ಲ. ಈಗ ಜಿಪಂ ತಾಪಂಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಬೇಕು ಎಂದು ಕಾನೂನು ಬಂದಿದ್ದಕ್ಕೆ ನೀಡಲಾಗುತ್ತಿದೆ. ಇಲ್ಲದಿದ್ದರೆ ಕೊಡ್ತಿದ್ರಾ ಎಂದು ಅಸಮಾಧಾನ ಹೊರ ಹಾಕಿದರು.
ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ಅಪ್ರಾಪ್ತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಶೀಘ್ರಗತಿ ನ್ಯಾಯಾಲಯಗಳನ್ನು ರಚಿಸಲಾಗಿದೆ. ಆದರೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣ ವಿಚಾರಣೆ ಸಾಮಾನ್ಯ ನ್ಯಾಯಾಲಯಗಳಲ್ಲಿ ನಡೆಯುತ್ತಿದ್ದು, ಅವುಗಳನ್ನು ಶೀಘ್ರಗತಿ (ಫಾಸ್ಟ್ರಾಕ್) ನ್ಯಾಯಾಲಯಗಳಲ್ಲಿ ನಡೆಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇನೆ ಎಂದರು.
ಕ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಅವರು ಅಲ್ಲಿನ ಹೆರಿಗೆ ವಾರ್ಡ್, ಹಾಗೂ ವಿವಿಧ ವಿಭಾಗಗಳ ಮಹಿಳಾ ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಹಿಳಾ ರೋಗಿಗಳಿಗೆ ಬಿಸಿ ನೀರು ಕೊಡದೇ ಇರುವ ದೂರು ಬಂದಿದ್ದು, ಅದನ್ನು ಸರಿಪಡಿಸುವಂತೆ ಡೀನ್ ಅವರಿಗೆ ತಿಳಿಸಿದ್ದೇನೆ. ಅಲ್ಲದೇ 300 ಕ್ಕೂ ಹೆಚ್ಚು ಗ್ರೂಪ್ ಡಿ ನೌಕರರು ಇದ್ದು ಅವರಿಗೆ 8 ತಿಂಗಳಿAದ ಪಿಎಫ್ ನೀಡದೇ ಇರುವುದು, ಋತುಚಕ್ರ ರಜೆ ನೀಡದೇ ಇರುವುದು ಗಮನಕ್ಕೆ ಬಂದಿದೆ. ಅವುಗಳ ಬಗ್ಗೆ ಡೀನ್ ಅವರಲ್ಲಿ ವರದಿ ಕೇಳಿದ್ದೇನೆ. ನೌಕರರಿಗೆ ಪರಿಷ್ಕೃತ ನಿಯಮದಂತೆ ವೇತನ ಜಾರಿ ಮಾಡುವಂತೆ ಆದೇಶಿಸಿದ್ದೇನೆ ಎಂದರು. ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಬಗ್ಗೆ ಅಽಕಾರಿಗಳಲ್ಲಿ ಅಸಮಾಧಾನ ತೋಡಿಕೊಂಡರು. ಒಂದು ದಿನದಲ್ಲಿ ಅದನ್ನು ಸರಿಪಡಿಸಬೇಕು ಎಂದು ಆದೇಶಿಸಿದರು.
ಗಂಡಸರ ಕೆಟ್ಟ ಮನಸ್ಥಿತಿ ಬದಲಾಗುವವರೆಗೂ ಪೋಕ್ಸೊದಂಥ ಘಟನೆಗಳು ಬದಲಾಗದು ಎಂದು ವಿಶ್ಲೇಷಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು. ಈ ಹಿಂದೆಯೂ ಪೋಕ್ಸೊ ಪ್ರಕರಣಗಳು ನಡೆಯುತ್ತಿದ್ದವು. ಆದರೆ, ಅವುಗಳು ಬೆಳಕಿಗೆ ಬರುತ್ತಿರಲಿಲ್ಲ. ಈಗ ಹೆಣ್ಣು ಮಕ್ಕಳು ಹಾಗೂ ಅವರ ಕುಟುಂಬದವರಲ್ಲಿ ಕನಿಷ್ಠ ದೂರು ನೀಡುವ ಧೈರ್ಯ ಬಂದಿದೆ. ಆದರೆ, ಇದುವರೆಗೂ ಪ್ರಕರಣಗಳು ಕಡಿಮೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಬಡವರು ಹಾಗೂ ದಲಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಅವುಗಳನ್ನು ತಡೆಯಲು ಸಾಕಷ್ಟು ಜಾಗೃತಿ ಮೂಡಿಸಲು ಸೂಚಿಸಿದ್ದೇನೆ. ಪೋಕ್ಸೊ ಪ್ರಕರಣಗಳು ದಾಖಲಾದ ನಂತರ ಅವರಿಗೆ ಪ್ರಕರಣಕ್ಕೆ ಅವಲಂಬಿಸಿ ಗರಿಷ್ಠ 5 ಲಕ್ಷದವರೆಗೆ ಪರಿಹಾರ ನೀಡಬೇಕಿದೆ. ಮಾತ್ರವಲ್ಲ ಶೋಷಿತರಿಗೆ ಪುನರ್ವಸತಿ ಕಲ್ಪಿಸುವುದೂ ಸಂಬಂಧಪಟ್ಟ ಆಡಳಿತದ ಜವಾಬ್ದಾರಿಯಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ಮಹಿಳಾ ಆಯೋಗದ ಅಧ್ಯಕ್ಷೆಯಾದ ನಂತರ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಕೊನೆಯ ಜಿಲ್ಲೆ ಉತ್ತರ ಕನ್ನಡವಾಗಿದೆ. ಜಿಲ್ಲೆಯಲ್ಲಿ ನಡೆದಿರುವ ಪೋಕ್ಸೊ ಪ್ರಕರಣಗಳು, ಅವುಗಳಿಗೆ ಕೈಗೊಂಡ ಕ್ರಮಗಳು, ಮಹಿಳೆಯರು, ಹೆಣ್ಣು ಮಕ್ಕಳ ಕಳ್ಳ ಸಾಗಣೆ, ಬ್ರೂಣ ಲಿಂಗ ಪತ್ತೆ ಮುಂತಾದವುಗಳ ಬಗ್ಗೆ ವರದಿ ಕೇಳಿದ್ದೇನೆ. ನ.23 ರಂದು ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ.ನ.24 ರಂದು ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಅಹವಾಲು ಸಭೆ ನಂತರ ಅಽಕಾರಿಗಳ ಸಭೆ ನಡೆಸಲಿದ್ದೇನೆ ಎಂದರು.
..........